ಕೊಚ್ಚಿ: ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮತ್ತು ಕಾರ್ಯಕರ್ತರನ್ನು ಪುನರುಜ್ಜೀವನಗೊಳಿಸುವ ಭಾಗವಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಅಂತಿಮ ಹಂತ ತಲುಪಿದ್ದು, ಇದೇ ಹೊತ್ತಿನಲ್ಲೇ ಕಾಂಗ್ರೆಸ್ ಪಕ್ಷದ ಚಿಹ್ನೆಯಾಗಿ 'ಹಸ್ತ' ಗುರುತು ಆಯ್ಕೆಯಾದ ಕುತೂಹಲಕಾರಿ ಅಂಶ ಕೂಡ ಇದೀಗ ಹೊರಬಿದ್ದಿದೆ.
ಹೌದು.. ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೂ ಕೇರಳದ ಪಾಲಕ್ಕಾಡ್ ಗೂ ಅವಿನಾಭಾವ ನಂಟಿದ್ದು, ಕಾಂಗ್ರೆಸ್ ಪಕ್ಷ ತನ್ನ ಗುರುತಾಗಿ ಹಸ್ತದ ಚಿನ್ಹೆಯನ್ನು ಆಯ್ಕೆ ಮಾಡಿಕೊಂಡಿದ್ದರ ಹಿಂದೆ ಕುತೂಹಲಕಾರಿ ಕಥೆ ಇದೆ. ಈ ಹಿಂದೆ ಎರ್ನಾಕುಲಂನಲ್ಲಿ ನಡೆದ ಎ.ಕೆ.ಆಂಟನಿ ನೇತೃತ್ವದ ಕಾಂಗ್ರೆಸ್ (ಎ) ಮತ್ತು ಕೆ.ಕರುಣಾಕರನ್ ನೇತೃತ್ವದ ಕಾಂಗ್ರೆಸ್ (ಐ) ವಿಲೀನದ ಮಹಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಇಂದಿರಾಗಾಂಧಿ ಅವರು ಬಿಡುವು ಮಾಡಿಕೊಂಡು ಇಲ್ಲಿನ ಕಲ್ಲೇಕುಲಂಗರದ ಶ್ರೀ ಎಮೂರ್ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ ಅವರಿಗೆ ಇಬ್ಬರು ತೆರೆದ ಅಂಗೈಗಳನ್ನು ಎತ್ತಿ ತೋರಿಸಿದ್ದರು. ಇದು ಇಂದಿರಾಗಾಂಧಿ ಅವರು ತಮ್ಮ ಪಕ್ಷದ ಚಿನ್ಹೆಯಾಗಿ ಹಸ್ತದ ಗುರುತು ಆಯ್ಕೆ ಮಾಡಲು ಪ್ರೇರಣೆಯಾಯಿತು ಎನ್ನಲಾಗಿದೆ.
ನೆಹರು ಕುಟುಂಬದೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ಪಿ ಎಸ್ ಕೈಲಾಸಂ ಅವರ ಪತ್ನಿ ಸೌಂದರ್ಯ ಕೈಲಾಸಂ ಅವರು ದೇವಾಲಯದ ದೇವತೆಯ 'ಕೈ' ಚಿಹ್ನೆಯನ್ನು ಪಕ್ಷವು ಅಳವಡಿಸಿಕೊಳ್ಳುವಂತೆ ಸೂಚಿಸಿದ್ದರು. ಈ ಸಲಹೆಯಿಂದ ಇಂದಿರಾ ಗಾಂಧಿ ಪ್ರಭಾವಿತರಾಗಿದ್ದರು ಎನ್ನಲಾಗಿದೆ. ನಂತರ, ಚಿಕ್ಕಮಗಳೂರಿನಿಂದ ಲೋಕಸಭೆ ಚುನಾವಣೆಯಲ್ಲಿ ಗೆದ್ದ ನಂತರ, ಕೈ ಚಿಹ್ನೆಯಲ್ಲಿ, ಡಿಸೆಂಬರ್ 13, 1982 ರಂದು ಕೇರಳಕ್ಕೆ ತನ್ನ ಮೊದಲ ಭೇಟಿಯ ಸಮಯದಲ್ಲಿ, ಅವರು ದೇವಾಲಯಕ್ಕೆ ಭೇಟಿ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಕಾಂಗ್ರೆಸ್ (ಐ) ಮತ್ತು ಕಾಂಗ್ರೆಸ್ (ಎ) ವಿಲೀನವನ್ನು ಘೋಷಿಸುವ ಎರ್ನಾಕುಲಂನ ಮರೈನ್ ಡ್ರೈವ್‌ನಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆ ವಹಿಸಲು ಅವರು ರಾಜ್ಯಕ್ಕೆ ಬಂದಿದ್ದರು ಎಂದು ಪಾಲಕ್ಕಾಡ್‌ನ ಮಾಜಿ ಕಾಂಗ್ರೆಸ್ ಸಂಸದ ವಿ ಎಸ್ ವಿಜಯರಾಘವನ್ ಹೇಳಿದ್ದಾರೆ. ಪಾಲಕ್ಕಾಡ್‌ಗೆ ಭೇಟಿ ನೀಡಿದಾಗ, ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಅಕ್ಕತೇತಾರಾದಲ್ಲಿ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು ಮತ್ತು ಅವರು ನ್ಯಾಯಮೂರ್ತಿ ಕೈಲಾಸಂ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದರು.
"ನನ್ನ ಕುಟುಂಬದ ಮುಖ್ಯಸ್ಥ ಕೃಷ್ಣನ್ ನಂಬೂದಿರಿ ಅವರು ಪೂಜೆಗಳನ್ನು ಮಾಡಲು ನವದೆಹಲಿಗೆ ಹೋಗುತ್ತಿದ್ದರು, ದೇವರ ವಿಗ್ರಹದ ಶಕ್ತಿಗಳ ಬಗ್ಗೆ ತಿಳಿಸಿದ್ದರು, ಭಗವತಿ ದೇವಿಯ ತೆರೆದ ಅಂಗೈಗಳು, ಅಂತಿಮವಾಗಿ ಅವರು ಹಸ್ತದ ಚಿಹ್ನೆಯನ್ನು ಆಯ್ಕೆ ಮಾಡಲು ಕಾರಣವಾಯಿತು" ಎಂದು ದೇವಸ್ಥಾನದ ತಂತ್ರಿ ನಂಬೂದಿರಿ ಕೈಮುಕ್ಕು ವಾಸುದೇವನ್ ಹೇಳಿದರು.
“ಇಂದಿರಾ ಗಾಂಧಿ ದೇವರನ್ನು ನೋಡಿ ಅವರು ಸಂತೋಷಪಟ್ಟರು. ಕಿರಿದಾದ ರಸ್ತೆಯನ್ನು 48 ಗಂಟೆಯೊಳಗೆ ಅಗಲೀಕರಣಗೊಳಿಸಿ ಡಾಂಬರೀಕರಣ ಮಾಡಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ಕಲ್ಲೇಕುಲಂಗರ ಅಚ್ಯುತನಕುಟ್ಟಿ ಮಾರಾರ್ ತಿಳಿಸಿದ್ದಾರೆ.
ತುರ್ತು ಪರಿಸ್ಥಿತಿಯ ನಂತರ ಕಾಂಗ್ರೆಸ್ ವಿಭಜನೆಯಾದ ನಂತರ, ಪಕ್ಷವು 'ಹಸು ಮತ್ತು ಕರು' ಚಿಹ್ನೆಯನ್ನು ಕಳೆದುಕೊಂಡಿತ್ತು. ಚುನಾವಣಾ ಆಯೋಗವು ಕೈ, ಸೈಕಲ್ ಅಥವಾ ಆನೆಯನ್ನು ಚಿಹ್ನೆಯಾಗಿ ಸೂಚಿಸಿತು ಮತ್ತು ಇಂದಿರಾಗಾಂಧಿ ಕೈ ಚಿನ್ಹೆಯನ್ನು ಆಯ್ಕೆ ಮಾಡಿದ್ದರು.