ತಿರುವನಂತಪುರಂ: ಚಲಿಸುತ್ತಿದ್ದ ಬೈಕ್ ಮುಂದೆ ಬೀದಿ ನಾಯಿಯೊಂದು ದಿಢೀರ್ ಜಿಗಿದ ಪರಿಣಾಮ ಬೈಕ್ ನಿಯಂತ್ರಣ ಕಳೆದುಕೊಂಡು ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳ ರಾಜಧಾನಿ ತಿರುವನಂತಪುರದಲ್ಲಿ ನಡೆದಿದೆ.
ಶುಕ್ರವಾರ ಸಂಜೆ 6 ಗಂಟೆಗೆ ಅರುವಿಯೋಡು ಜಂಕ್ಷನ್ ಬಳಿ ಅಪಘಾತ ಸಂಭವಿಸಿತ್ತು. ಬಳಿಕ ಯುವಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ (ಸೆ.14) ಕೊನೆಯುಸಿರೆಳೆದಿದ್ದಾನೆ.
ಮೃತ ಯುವಕನನ್ನು ಅಜಿನ್ ಎ.ಎಸ್. ಎಂದು ಗುರುತಿಸಲಾಗಿದೆ. ಅಜಿನ್ ಬೈಕ್ ಮುಂದೆ ಇನ್ನೊಂದು ಬೈಕ್ ಹೋಗುತ್ತಿತ್ತು. ಈ ವೇಳೆ ಬೀದಿ ನಾಯಿಯೊಂದು ಬೈಕ್ ಮುಂದೆ ದಿಢೀರ್ ಜಿಗಿಯಿತು. ಪರಿಣಾಮ ಬೈಕ್ ನಿಯಂತ್ರಣ ಕಳೆದುಕೊಂಡು ಸವಾರ ಬೈಕ್ ಸಮೇತ ಕೆಳಗೆ ಬಿದ್ದಿದ್ದಾನೆ. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಅಜಿನ್ ಕೆಳಗಡೆ ಬಿದ್ದಿದ್ದ ಬೈಕ್ಗೆ ಡಿಕ್ಕಿ ಹೊಡೆದು ತಾನು ಬೈಕ್ ಸಮೇತ ಕೆಳಗೆ ಹಾರಿ ಬಿದ್ದಿದ್ದ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಜೀನ್ನನ್ನು ಕಾರಕೊಣಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಜಿನ್ಗೆ ಸರ್ಜರಿ ಮಾಡಿದರೂ ಕೊನೆಗೆ ಬದುಕುಳಿಯಲಿಲ್ಲ. ಅಜಿನ್ಗೆ ಮದುವೆ ಕೂಡ ಆಗಿತ್ತು. ಪತ್ನಿ ನೀತು ಮತ್ತು ಮಗಳು ಯುವನಾಳನ್ನು ಬಿಟ್ಟು ಅಜಿನ್ ಅಕಾಲಿಕವಾಗಿ ಅಗಲಿದ್ದಾರೆ.
ಈ ನಡುವೆ ತಿರುವನಂತಪುರದಲ್ಲಿ ಮತ್ತೊಂದು ಬೀದಿನಾಯಿ ದಾಳಿ ವರದಿಯಾಗಿದೆ. ನ್ಯಾಷನಲ್ ಕ್ಲಬ್ನ ಉದ್ಯೋಗಿ ಶ್ರೀನಿವಾಸನ್, ಬೀದಿ ನಾಯಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಂಗಳವಾರ (ಸೆ.13) ರಾತ್ರಿ 10:30 ರ ಸುಮಾರಿಗೆ ಒಟ್ಟುಕುಜಿಯಲ್ಲಿ ಈ ಘಟನೆ ನಡೆದಿದೆ. ಹಿಂಬದಿ ಸವಾರ ಶ್ರೀನಿವಾಸನ್ ಅವರಿಗೆ ನಾಯಿ ಕಚ್ಚಿದೆ. ಅವರಿಗೆ ಆಳವಾದ ಗಾಯಗಳಾಗಿವೆ. ಶ್ರೀನಿವಾಸನ್ ಅವರನ್ನು ಮೊದಲು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.