ಭುವನೇಶ್ವರ್: ಒಡಿಶಾದ ಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ವಿಷಪೂರಿತ ಇರುವೆಗಳು ದಾಂಗುಡಿ ಇಟ್ಟಿದ್ದು, ಬಹುತೇಕ ಗ್ರಾಮಸ್ಥರು ಊರು ತೊರೆಯುವಂತೆ ಮಾಡಿವೆ. ಈ ವಿಚಿತ್ರವಾದ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಗ್ರಾಮದ ಅಧಿಕಾರಿಗಳು ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಪ್ರವಾಹ ಪರಿಸ್ಥಿತಿಯಿಂದಾಗಿ ಬ್ರಹ್ಮನ್ಸಾಹಿ ಗ್ರಾಮದಲ್ಲಿ ಈ ಸಮಸ್ಯೆ ಎದುರಾಗಿದ್ದು ಲಕ್ಷಾಂತರ ಕೆಂಪು ಹಾಗೂ ಫೈರ್ ಆಂಟ್ ಎಂದು ಕರೆಸಿಕೊಳ್ಳುವ ಇರುವೆಗಳು ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಅವುಗಳಿಂದ ಗ್ರಾಮಸ್ಥರಿಗೆ ಮುಕ್ತಿ ಕೊಡಿಸುವುದಕ್ಕೆ ಜಿಲ್ಲಾ ಆಡಳಿತ ಹಾಗೂ ಒಡಿಶಾದ ಕೃಷಿ ಹಾಗೂ ತಂತ್ರಜ್ಞಾನ ವಿವಿಯ ವಿಜ್ಞಾನಿಗಳು ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.
ಮನೆಗಳು, ರಸ್ತೆ, ಕೃಷಿ ಭೂಮಿ, ಮರ ಹೀಗೆ ಎಲ್ಲೆಂದರಲ್ಲಿ ಇರುವೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಸಹಜ ಜೀವನವನ್ನು ಬುಡಮೇಲು ಮಾಡಿವೆ, ಹಲವರಿಗೆ ಈ ಇರುವೆಗಳು ಕಚ್ಚಿದ ಪರಿಣಾಮ, ಊತ, ಚರ್ಮದ ಕಿರಿಕಿರಿ ಉಂಟಾಗಿದ್ದು, ಮನೆಯಲ್ಲಿನ ಸಾಕು ಪ್ರಾಣಿಗಳ ಮೇಲೆಯೂ ದಾಳಿ ಮಾಡಿವೆ.
ಇರುವೆ ಕಾಟ ತಡೆಯಲಾರದೇ ಗ್ರಾಮದಲ್ಲಿರುವ ಹಲವರು ಗ್ರಾಮವನ್ನು ತೊರೆಯುತ್ತಿದ್ದರೆ, ಇರುವ ಕೆಲವು ಮಂದಿ ಕೂತಲ್ಲಿ, ನಿಂತಲ್ಲಿ, ಮಲಗಿದಾಗ ತಮ್ಮ ಸುತ್ತ ಕೀಟನಾಶಕ ಪುಡಿಗಳು ವೃತ್ತಾಕಾರದಲ್ಲಿ ಸಿಂಪಡಿಸಿ ಇರುವೆಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ ಎಂದು ಲೋಕನಾಥ್ ದಶ್ ಎಂಬ ಗ್ರಾಮಸ್ಥರು ಹೇಳಿದ್ದಾರೆ. ಈ ಹಿಂದೆಯೂ ಗ್ರಾಮದಲ್ಲಿ ಪ್ರವಾಹ ಸ್ಥಿತಿ ಉಂಟಾಗಿತ್ತು. ಆದರೆ ಎಂದೂ ಈ ರೀತಿಯ ಇರುವೆ ದಾಳಿಯನ್ನು ತಾವು ಕಂಡಿಲ್ಲ ಎನ್ನುತ್ತಾರೆ ಲೋಕನಾಥ್ ದಶ್.