ಬದಿಯಡ್ಕ: ಬ್ರಹ್ಮೈಕ್ಯ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಪಾದಂಗಳ ದ್ವಿತೀಯ ವರ್ಷದ ಆರಾಧನೆ ನಾಳೆ(ಸೆ.14) ಶ್ರೀಮಠ ಪರಿಸರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 7 ರಿಂದ 8.30ರ ವರೆಗೆ ವಿವಿಧ ಪೂಜಾದಿ ವಿಧಿಗಳು, ಮಹಾಪೂಜೆ ನಡೆಯಲಿದೆ. 9 ಕ್ಕೆ ಧ್ವಜಾರೋಹಣ, ಬ್ರಹ್ಮೈಕ್ಯ ಶ್ರೀಕೇಶವಾನಂದ ಭಾರತೀ ಪಾದಂಗಳ ಬಗ್ಗೆ ರಚಿಸಿದ ಕವನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ, ಎನ್.ರಮೇಶ್ ಗುಬ್ಬಿ ಸಾಹಿತ್ಯ ರಚಿಸಿ ಅನೂರು ಅನಂತಕೃಷ್ಣ ಶರ್ಮ ಸಂಗೀತ ಸಂಯೋಜಿಸಿರುವ ಧ್ವನಿಚಕ್ರ ಗುರುಗೀತ ಲಹರಿ ಬಿಡುಗಡೆ ನಡೆಯಲಿದೆ. 9.45 ರಿಂದ ವಿದ್ವಾನ್ ವಿಠಲ ರಾಮಮೂರ್ತಿ ಚೆನ್ನೈ ಹಾಗೂ ವಿದ್ವಾನ್ ವಿ.ವಿ.ಎಸ್. ಮುರಾರಿ ಚೆನ್ನೈ ಅವರಿಂದ ದ್ವಂದ್ವ ವಯಲಿನ್ ವಾದನ ನಡೆಯಲಿದೆ. ವಿದ್ವಾನ್.ಮುಷ್ಣಂ ರಾಜಾರಾವ್ ಚೆನ್ನೈ(ಮೃದಂಗ), ವಿದ್ವಾನ್.ಜಿ.ಎಸ್.ರಾಮಾನುಜಂ ಮೈಸೂರು((ಘಟಂ),ವಿದ್ವಾನ್ ಗೋವಿಂದ ಪ್ರಸಾದ್ ಪಯ್ಯನ್ನೂರು(ಮೋರ್ಸಿಂಗ್)ನಲ್ಲಿ ಸಹಕರಿಸುವರು.
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ವೃಂದಾವನ ಪೂಜೆ ನಡೆಯಲಿದೆ. ಅಪರಾಹ್ನ 2 ರಿಂದ ಮಂತ್ರಾಕ್ಷತೆ ಪ್ರದಾನ, 3 ರಿಂದ ಆರಾಧನೋತ್ಸವ ಮಹಾಸಭೆಯು ಶ್ರೀಸಚ್ಚಿದಾನಂದ ಭಾರತೀ ಪಾದಂಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಗುರುಸ್ಮರಣೆ ನಡೆಸುವರು. ಈ ಸಂದರ್ಭ ಖ್ಯಾತ ವೈದ್ಯ ಡಾ.ಬಿ.ಎಸ್.ರಾವ್ ಹಾಗೂ ವೈದ್ಯ, ಸಾಹಿತಿ, ತಾಳಮದ್ದಳೆ ಅರ್ಥಧಾರಿ ಡಾ.ರಮಾನಂದ ಬನಾರಿ ಅವರಿಗೆ ಶ್ರೀಕೇಶವಾನಂದ ಭಾರತೀ ಶ್ರೀಗಳ ಸ್ಮøತಿ ಗೌರವ ಪ್ರದಾನ ನಡೆಯಲಿದೆ. ಡಾ.ಎಂ.ಪ್ರಭಾಕರ ಜೋಶಿ ಹಾಗೂ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣಮಾಡುವರು. ಸಂಜೆ 5 ರಿಂದ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಚಂದ್ರಾವಳಿ ವಿಲಾಸ, ಮಾಯಾ ಮಾರುತೇಯ, ಚೂಡಾಮಣಿ, ಮಕರಾಕ್ಷ ಕಾಳಗ ಆಖ್ಯಾನಗಳ ಬಯಲಾಟ ನಡೆಯಲಿದೆ. 7 ರಿಂದ ಶ್ರೀದೇವರ ಪೂಜೆ, ವೃಂದಾವನ ಪೂಜೆ ನಡೆಯಲಿದೆ.