ತಿರುವನಂತಪುರಂ: ಎನ್ಐಎ ದಾಳಿ ವಿರೋಧಿಸಿ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂದ್ ಗೆ ಘೋಷಣೆ ನೀಡಿದ ನಂತರ ಕೇರಳ ರಾಜ್ಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಹೈಕೋರ್ಟ್ ಶುಕ್ರವಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಬಂದ್ ನ್ನು ಈ ಹಿಂದೆಯೇ ನಿಷೇಧಿಸಲಾಗಿತ್ತು, ಸಾರ್ವಜನಿಕ ಆಸ್ತಿ ನಾಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಬಂದ್ ನಿಷೇಧಿಸುವ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ನ್ಯಾಯಾಲಯವು ರಾಜ್ಯಡಳಿತಕ್ಕೆ ಹೇಳಿದೆ. ಹಿಂಸಾಚಾರವನ್ನು ನಿಲ್ಲಿಸಲು ಸಾಧ್ಯವಿರುವ ಎಲ್ಲ ವಿಧಾನಗಳನ್ನು ಬಳಸುವಂತೆ ಅದು ಸರ್ಕಾರಕ್ಕೆ ಸೂಚಿಸಿದೆ.
ಶುಕ್ರವಾರ ಬೆಳಗ್ಗೆಯಿಂದ ಕೇರಳದ ವಿವಿಧ ಭಾಗಗಳಲ್ಲಿ ಪಿಎಫ್‌ಐ ಕರೆ ನೀಡಿರುವ ಬಂದ್ ನಿಂದಾಗಿ ಕಲ್ಲು ತೂರಾಟ ಸೇರಿದಂತೆ ಅಲ್ಲಲ್ಲಿ ಹಿಂಸಾಚಾರದ ಘಟನೆಗಳು ವರದಿಯಾಗಿವೆ.
ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲಿಸಲಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತಿತರ ಏಜೆನ್ಸಿಗಳು ಗುರುವಾರ ಇಸ್ಲಾಮಿಕ್ ಸಂಘಟನೆಯ ನಾಯಕರ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಪಿಎಫ್‌ಐ ಈ ಬಂದ್ ಗೆ ಕರೆ ನೀಡಿದೆ.