ನವದೆಹಲಿ: ಬೆಂಕಿ ಹಚ್ಚಿರುವ ಖಾಕಿ ಚಡ್ಡಿಯ ಚಿತ್ರವನ್ನು ಸೋಮವಾರ ಟ್ವಿಟರ್‌ನಲ್ಲಿ ಪ್ರಕಟಿಸಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಆರ್‌ಎಸ್‌ಎಸ್ ಕೆಂಗಣ್ಣಿಗೆ ಗುರಿಯಾಗಿದೆ.
'ಇನ್ನು 145 ದಿನಗಳು ಉಳಿದಿವೆ. ದೇಶವನ್ನು ದ್ವೇಷದ ಸಂಕೋಲೆಯಿಂದ ಬಿಡಿಸುವುದು ಹಾಗೂ ಬಿಜೆಪಿ-ಆರ್‌ಎಸ್‌ಎಸ್ ಮಾಡಿರುವ ಹಾನಿಯನ್ನು ಸರಿಪಡಿಸುವುದು ನಮ್ಮ ಗುರಿ.
ಹಂತ ಹಂತವಾಗಿ ಈ ಗುರಿ ಮುಟ್ಟುತ್ತೇವೆ' ಎಂದು ಚಿತ್ರಕ್ಕೆ ಅಡಿಬರಹ ನೀಡಲಾಗಿದೆ. ಇದು ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
ಕಾಂಗ್ರೆಸ್ ಹಿಂಸೆಗೆ ಸ್ಪಷ್ಟ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ತಕ್ಷಣ ಪೋಸ್ಟರ್ ತೆಗೆದುಹಾಕುವಂತೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಪಕ್ಷವು ದ್ವೇಷ ಹಬ್ಬಿಸುವ ಮೂಲಕ ಜನರನ್ನು ಒಗ್ಗೂಡಿಸಲು ಯತ್ನಿಸುತ್ತಿದೆ ಎಂದು ಆರ್‌ಎಸ್‌ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಟೀಕಿಸಿದ್ದಾರೆ.
ಕಾಂಗ್ರೆಸ್‌ನ ಈ ಹಿಂದಿನ ನಾಯಕರು ಸಹ ದ್ವೇಷ ಹಾಗೂ ನಿಂದನೆಯನ್ನು ಅಸ್ತ್ರವಾಗಿ ಬಳಸಿದ್ದರೂ ಸಂಘದ ಏಳ್ಗೆಯನ್ನು ತಡೆಯಲಾಗಲಿಲ್ಲ ಎಂದು ಅವರು ಹೇಳಿದ್ದಾರೆ. ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪ್ರತಿಕ್ರಿಯೆಗೆ ಕಾಂಗ್ರೆಸ್ ಪ್ರಬಲ ತಿರುಗೇಟು ನೀಡಿದೆ. 'ದ್ವೇಷ, ಮತಾಂಧತೆ ಹಾಗೂ ಪೂರ್ವಗ್ರಹದ ಬೆಂಕಿ ಹೊತ್ತಿಸಿದವರು ಅವುಗಳನ್ನು ವಾಪಸ್ ಪಡೆಯಲು ಸಿದ್ಧರಾಗಲೇಬೇಕು' ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇರಾನಿಗೆ ತಿರುಗೇಟು: ಭಾರತ್ ಜೋಡೊ ಯಾತ್ರೆಗೆ ಜನರಿಂದ ಭಾರಿ ಸ್ಪಂದನೆ ವ್ಯಕ್ತವಾಗಿದ್ದಕ್ಕೆ ಇರಿಸು
ಮುರಿಸುಗೊಂಡಿರುವ
ಬಿಜೆಪಿಯು ಹಗಲಿರುಳು ಸುಳ್ಳುಗಳನ್ನು ಹೆಣೆಯುತ್ತಿದೆ ಎಂದು ಕಾಂಗ್ರೆಸ್ ಸೋಮವಾರ
ತಿರುಗೇಟು ನೀಡಿದೆ. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದ
ಸ್ಮಾರಕಕ್ಕೆ ಭೇಟಿ ನೀಡಬೇಕಿತ್ತು ಎಂದು ಟೀಕಿಸಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿ
ಅವರನ್ನು ಕಾಂಗ್ರೆಸ್ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಖಂಡರಾದ ಪವನ್ ಖೇರಾ,
ಮಾಣಿಕಂ ಟಾಗೋರ್ ಅವರು ರಾಹುಲ್ ಅವರು ವಿವೇಕಾನಂದ ಸ್ಮಾರಕಕ್ಕೆ ಭೇಟಿ ನೀಡಿದ್ದ
ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಸಿಪಿಎಂ ಟೀಕೆ: ಎಡಪಕ್ಷಗಳ ಆಡಳಿತ ಇರುವ ಕೇರಳದಲ್ಲಿ 19 ದಿನದ ಭಾರತ್ ಜೋಡೊ ಯಾತ್ರೆ ಹಮ್ಮಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶದಲ್ಲಿ ಕೇವಲ 2 ದಿನಗಳಿಗೆ ಯಾತ್ರೆಯನ್ನು ಸೀಮಿತಗೊಳಿಸಿದೆ ಎಂದು ಸಿಪಿಎಂ ಆರೋಪಿಸಿದೆ. ಇದು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧದ ಹೋರಾಟದ ಅಚ್ಚರಿಯ ವಿಧಾನ ಎಂದು ಟೀಕಿಸಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕೇರಳದಲ್ಲಿ ಎಡಪಕ್ಷಗಳನ್ನು ಬಿಜೆಪಿಯ 'ಎ ಟೀಮ್' ಎಂದು ಲೇವಡಿ ಮಾಡಿದ್ದಾರೆ.
ಕೇರಳ: ಭಾರತ್ ಜೋಡೊ ಯಾತ್ರೆಗೆ ಕಿಕ್ಕಿರಿದ ಜನ
ತಿರುವನಂತಪುರ: ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯು ಕೇರಳದಲ್ಲಿ ಎರಡನೇ ದಿನಕ್ಕೆ ಅಡಿಯಿಟ್ಟಿದ್ದು, ಭಾರಿ ಜನಸ್ಪಂದನ ವ್ಯಕ್ತವಾಗಿದೆ. ನಗರದ ಹೊರವಲಯದ ವೆಲ್ಲಯಾನಿ ಜಂಕ್ಷನ್‌ನಿಂದ ಸೋಮವಾರ ಬೆಳಿಗ್ಗೆ ಯಾತ್ರೆ ಆರಂಭಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ನೋಡಲು ರಸ್ತೆಯ ಎರಡೂ ಬದಿಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದ ದೃಶ್ಯ ಕಂಡುಬಂದಿತು. ಸಾವಿರಾರು ಜನರು ರಾಹುಲ್ ನೇತೃತ್ವದ ಯಾತ್ರೆಯಲ್ಲಿ ಹೆಜ್ಜೆಹಾಕಿದರು.
ಯಾತ್ರೆಯಲ್ಲಿ ಭಾರಿ ಸಂಖ್ಯೆಯ ಜನರು ಸೇರಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ರಾಹುಲ್, 'ಪ್ರತಿ ಮುಂಜಾನೆಯೂ ಹೊಸ ಭರವಸೆಯೊಂದಿಗೆ ಆರಂಭವಾಗುತ್ತಿದೆ. ಉತ್ತಮ ನಾಳೆಗಳಿಗಾಗಿ ಭಾರತ ಹಾಗೂ ಯುವ ಜನಾಂಗ ಕಾಯುತ್ತಿದೆ' ಎಂದು ಅವರು ಫೇಸ್‌ಬುಕ್‌ನಲ್ಲಿ ಉಲ್ಲೇಖಿಸಿದ್ದಾರೆ. ರಾಹುಲ್ ಅವರು ರಾಜ್ಯದ ವಯನಾಡ್ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದಾರೆ.
12 ಕಿಲೋಮೀಟರ್ ದೂರವನ್ನು ಮೂರು ಗಂಟೆಗಳಲ್ಲಿ ಪಾದಯಾತ್ರಿಗಳು ಕ್ರಮಿಸಿದರು. ಸಂಸದರಾದ ಶಶಿ ತರೂರ್, ಕೆ.ಸಿ. ವೇಣುಗೋಪಾಲ್, ಕೇರಳ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ. ಸುಧಾಕರನ್, ಪ್ರತಿಪಕ್ಷದ ನಾಯಕ ವಿ.ಡಿ. ಸತೀಶನ್ ಅವರ ಜತೆ ಮಕ್ಕಳು, ಯುವಜನರು ಹಾಗೂ ವಯಸ್ಸಾದವರೂ ಯಾತ್ರೆಯಲ್ಲಿ ಪಾಲ್ಗೊಂಡರು.
ಕೇರಳದಲ್ಲಿ ಭಾನುವಾರ ಶುರುವಾದ ಭಾರತ್ ಜೋಡೊ ಯಾತ್ರೆಯು ರಾಜ್ಯದ 7 ಜಿಲ್ಲೆಗಳಲ್ಲಿ 450 ಕಿಲೋಮೀಟರ್ ದೂರವನ್ನು 19 ದಿನಗಳಲ್ಲಿ ಕ್ರಮಿಸಲಿದೆ. ಅಕ್ಟೋಬರ್ 1ರಂದು ಯಾತ್ರೆಯು ಕರ್ನಾಟಕವನ್ನು ಪ್ರವೇಶಿಸಲಿದೆ.
ಜೇಬುಗಳ್ಳರ ಕೈಚಳಕ: ಯಾತ್ರೆಯಲ್ಲಿ ಭಾರಿ ಸಂಖ್ಯೆಯ ಜನರು ಸೇರಿದ್ದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿರುವ ಜೇಬುಗಳ್ಳರು, ತಮ್ಮ ಕೈಚಳಕ ತೋರಿಸಿದ ಪ್ರಸಂಸಗಳು ನಡೆದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಜೇಬು ಕತ್ತರಿಸುತ್ತಿದ್ದ ನಾಲ್ಕು ಸದಸ್ಯರ ತಂಡವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.