ಗುವಾಹಟಿ: ಆರು ತಿಂಗಳ ಹಿಂದೆ ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಹಲ್ಲೆಗೊಳಗಾಗಿದ್ದ ಬಾಲಕನಿಗೆ ರೂ. 25,000 ಪರಿಹಾರ ಒದಗಿಸುವಂತೆ ಅಸ್ಸಾಂ(Assam) ಸರಕಾರಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC) ಆದೇಶಿಸಿದೆ.
ಈ ಪ್ರಕರಣದಲ್ಲಿ ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಂತ್ರಸ್ತ 13 ವರ್ಷದ ಬಾಲಕನಿಗೆ ನಾಲ್ಕು ವಾರಗಳೊಳಗೆ ಪರಿಹಾರ ನೀಡಬೇಕು ಎಂದು ಅಸ್ಸಾಂ ಮುಖ್ಯ ಕಾರ್ಯದರ್ಶಿ ಪಬನ್ ಕುಮಾರ್ ಬೊರ್ತಕೂರ್ ಅವರಿಗೆ ಬರೆದ ಪತ್ರದಲ್ಲಿ ಆಯೋಗದ ಉಪ ರಿಜಿಸ್ಟ್ರಾರ್ (ಕಾನೂನು) ಇಂದ್ರಜೀತ್ ಕುಮಾರ್ ಹೇಳಿದ್ದಾರೆ.
ಲಹೋರಿಜನ್ ಪೊಲೀಸ್ ಠಾಣೆಯ ಆವರಣದಲ್ಲಿ ನಿಲ್ಲಿಸಲಾಗಿದ್ದ ವಶಪಡಿಸಿಕೊಳ್ಳಲಾಗಿದ್ದ ವಾಹನವೊಂದರಿಂದ ಕಳ್ಳತನಗೈಯ್ಯಲು ಬಾಲಕ ಯತ್ನಿಸುತ್ತಿದ್ದಾಗ ಎಎಸ್ಸೈ ಒಬ್ಬರು ಆತನನ್ನು ಈ ವರ್ಷದ ಮಾರ್ಚ್ 9ರಂದು ಸೆರೆ ಹಿಡಿದಿದ್ದರು.
ನಂತರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವೀಡಿಯೊವೊಂದರಲ್ಲಿ ಅಧಿಕಾರಿಯು ಬಾಲಕನಿಗೆ ಠಾಣೆಯೊಳಗೆ ಕೋಲಿನಿಂದ ಬಾರಿಸುತ್ತಿರುವುದು ಕಂಡು ಬಂದಿತ್ತು. ಈ ಸಂಬಂಧ ಗುವಹಾಟಿಯ ನಿವಾಸಿ ಮೊನೊಜಿತ್ ಸಿಂಘ ಎಂಬವರು ದಾಖಲಿಸಿದ್ದ ದೂರನ್ನು ಪರಿಗಣಿಸಿದ ಆಯೋಗ ಈ ಪ್ರಕರಣದಲ್ಲಿ ಬಾಲಕನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.
ನಾಲ್ಕು ವಾರಗಳೊಳಗೆ ಬಾಲಕನಿಗೆ ಪರಿಹಾರ ವಿತರಿಸಿದ ಕುರಿತ ಪುರಾವೆಯೊಂದಿಗೆ ಕೈಗೊಂಡ ಕ್ರಮದ ವರದಿಯನ್ನು ಅಕ್ಟೋಬರ್ 22ರೊಳಗೆ ಆಯೋಗಕ್ಕೆ ಸಲ್ಲಿಸುವಂತೆಯೂ ಸಂಬಂಧಿತ ಇಲಾಖೆಗೆ ಸೂಚಿಸಲಾಗಿದೆ.