ನವದೆಹಲಿ : ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಬುಟ್ಟಿಗೆ ಕೈಹಾಕದೇ, ಸಾಮಾನ್ಯ ವರ್ಗಕ್ಕೆ ಮೀಸಲಿದ್ದ ಶೇ 50 ಮೀಸಲಾತಿಯಲ್ಲಿ ಶೇ 10ರಷ್ಟನ್ನು ಇದೇ ಮೊದಲ ಬಾರಿಗೆ ಆರ್ಥಿಕವಾಗಿ ದುರ್ಬಲವಾದ ವರ್ಗಗಳಿಗೆ (ಇಡಬ್ಲ್ಯುಎಸ್) ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಾಂವಿಧಾನಿಕ ಪೀಠಕ್ಕೆ ಈ ಮಾಹಿತಿ ನೀಡಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, 'ಸಂವಿಧಾನದ ಮೂಲ ಪರಿಕಲ್ಪನೆಯನ್ನು ಇದು ಉಲ್ಲಂಘಿಸದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಎಸ್‌ಇಬಿಸಿ) ಶೇ 50 ಕೋಟಾಕ್ಕೂ ಇದರಿಂದ ಚ್ಯುತಿಯಾಗದು' ಎಂದರು.
ಆದರೆ ತಮಿಳುನಾಡು ಮಾತ್ರ ಈ ಕೋಟಾವನ್ನು ವಿರೋಧಿಸುತ್ತ ಬಂದಿದೆ. ಮೀಸಲಾತಿ ನಿರ್ಧಾರಕ್ಕೆ ಆರ್ಥಿಕ ಮಾನದಂಡ ಆಧಾರವಾಗಬಾರದು, ಇಡಬ್ಲ್ಯುಎಸ್ ಅನ್ನು ಕೋರ್ಟ್ ಎತ್ತಿ ಹಿಡಿದಿದ್ದೇ ಆದರೆ ಇಂದಿರಾ ಸಾಹ್ನಿ (ಮಂಡಲ್) ತೀರ್ಪನ್ನು ಪುನರ್ ಪರಿಶೀಲಿಸಬೇಕಾಗುತ್ತದೆ ಎಂದು ಹೇಳಿದೆ.