ಕಾಸರಗೋಡು: ಸಮಾಜವನ್ನು ಒಗ್ಗೂಡಿಸುವ ಶಕ್ತಿ ಸಾಹಿತ್ಯದಲ್ಲಿ ಅಡಕವಾಗಿದೆ ಎಂದು ಹಿರಿಯ ಕವಿ ಬಿ.ಆರ್ ಲಕ್ಷ್ಮಣ ರಾವ್ ತಿಳಿಸಿದ್ದಾರೆ.
ಅವರು ಶನಿವಾರ ಕರ್ನಾಟಕ ಸಾಹಿತ್ಯ ಅಕಾಡಮಿ, ಶ್ರೀಎಡನೀರು ಮಠ ಮತ್ತು ಕಾಸರಗೋಡು ಜಿಲ್ಲಾ ಲೇಖಕರ ಸಂಘದ ಸಹಯೋಗದಲ್ಲಿ ಎಡನೀರು ಮಠದ ಸಭಾಂಗಣದಲ್ಲಿ ಮೂರು ದಿವಸಗಳಿಂದ ನಡೆದುಬರುತ್ತಿದ್ದ ರಾಷ್ಟ್ರೀಯ ಮಟ್ಟದ ಕಾವ್ಯ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣ ಮಾಡಿದರು.
ಇಂದು ಸಮಾಜವನ್ನು ಕಟ್ಟುವ ಸಾಹಿತ್ಯ ನಮಗೆ ಬೇಕಾಗಿದೆ. ಪ್ರತಿಭಾನ್ವಿತರನ್ನು ಮುಂಚೂಣಿಗೆ ತರುವಲ್ಲಿ ಕಾವ್ಯಕಮ್ಮಟಗಳು ಹೆಚ್ಚು ಪ್ರಸಕ್ತವಾಗಿದೆ. ಕನ್ನಡದ ಕಾವ್ಯಗಳ ಕೊರತೆ ನೀಗಿಸುವಲ್ಲಿ ಇಂತಹ ಕಮ್ಮಟ ಸಹಕಾರಿಯಾಗಲಿದೆ ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ವಿದ್ವೇಷವನ್ನು ಹೋಗಲಾಡಿಸಿ, ಸಮಾಜದಲ್ಲಿ ಸುಮನಸ್ಸುಗಳನ್ನು ಒಟ್ಟುಗೂಡಿಸುವ ಕಾರ್ಯವನ್ನು ಸಾಹಿತ್ಯ ನಡೆಸುತ್ತದೆ. ಗಡಿನಾಡಿನ ಕನ್ನಡಿಗರು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಮಧ್ಯೆ ಕಾಸರಗೋಡಿನ ನೆಲದಲ್ಲಿ ಸಾಹಿತ್ಯದ ಚಟುವಟಿಕೆಗಳನ್ನು ನಿರಂತರ ನಡೆಸಿಕೊಂಡು ಬರುವುದರಿಂದ ಇಲ್ಲಿನ ಕನ್ನಡಿಗರಲ್ಲಿ ಆತ್ಮಸ್ಥೈರ್ಯ ಹೆಚ್ಚುವುದರ ಜತೆಗೆ ಮಾನಸಿಕ ನೆಮ್ಮದಿ ಲಭಿಸಲು ಕಾರಣವಾಗುತ್ತಿದೆ. ಕಾಸರಗೋಡು ಕರ್ನಾಟಕ ಸೇರ್ಪಡೆ ರಾಜಕೀಯ ವಿಚಾರವಾಗಿದ್ದು, ಸಾಹಿತ್ಯಿಕವಾಗಿ, ಸಾಂಸ್ಕøತಿಕವಾಗಿ ಕರ್ನಾಟಕ ಸರ್ಕಾರ ಗಡಿನಾಡ ಕನ್ನಡಿಗರ ಜತೆಗಿರುವುದು ಸಂತಸ ತಂದುಕೊಟ್ಟಿದೆ ಎಂದು ತಿಳಿಸಿದರು. ಎಡನೀರು ಮಠದಲ್ಲಿ ಮೂರು ದಿವಸಗಳ ಕಾಲ ನಡೆದಿರುವ ಕಾವ್ಯ ಕಮ್ಮಟ ಅವಿಸ್ಮರಣೀಯವಾಗಿದ್ದು, ಇಂತಹ ಕಮ್ಮಟ ಸಾಹಿತ್ಯವನ್ನು ಸೃಜನಶೀಲವನ್ನಾಗಿಸುವುದರ ಜತೆಗೆ ಸೃಜನಶೀಲ ಸಾಹಿತಿಗಳನ್ನು ಮುಂಚೂಣಿಗೆ ಬರುವಂತೆ ಮಾಡುವಲ್ಲೂ ಸಹಕಾರಿ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಡಾ. ಬಿ.ವಿ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಮ್ಮಟ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ, ನಾಗರಾಜ್ ತಳಕಾಡು, ಬಿ.ಆರ್. ಶಿವರಾಜ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಕಳೆದ ಮೂರು ದಿವಸಗಳಿಂದ ತಾವು ಪಡೆದ ಅನುಭವಗಳನ್ನು ಮಂಡಿಸಿದರು. ಈ ಸಂದರ್ಭ ಕರ್ನಾಟಕ ಸಾಹಿತ್ಯ ಅಕಾಡಮಿ ವತಿಯಿಂದ ಎಡನೀರು ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಅನುವಾದಕ ಪ್ರೊ. ಪಿ.ಎನ್ ಮೂಡಿತ್ತಾಯ ಸ್ವಾಗತಿಸಿದರು. ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯ ಸಂಚಾಲಕ ಕೇಶವ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಸಮಾಜವನ್ನು ಒಗ್ಗೂಡಿಸುವ ಶಕ್ತಿ ಸಾಹಿತ್ಯಕ್ಕಿದೆ: ರಾಷ್ಟ್ರೀಯ ಕಾವ್ಯಕಮ್ಮಟ ಸಮಾರೋಪ ಸಮಾರಂಭದಲ್ಲಿ ಸಾಹಿತಿ ಬಿ.ಆರ್. ಲಕ್ಷ್ಮಣ ರಾವ್ ಅಭಿಮತ
0
ಸೆಪ್ಟೆಂಬರ್ 24, 2022
Tags