ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಉತ್ತರ ಪ್ರದೇಶ (Uttar Pradesh) ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪತ್ರಕರ್ತ ಸಿದ್ದಿಕ್ ಕಪ್ಪನ್(Siddique Kappan) ಅವರಿಗೆ ಸರ್ವೋಚ್ಚ ನ್ಯಾಯಾಲಯವು(Supreme Court) ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ವಿಚಾರಣೆ ಸಂದರ್ಭ, ಕಪ್ಪನ್‌ರಿಂದ ವಶಪಡಿಸಿಕೊಳ್ಳಲಾದ ದಾಖಲೆಗಳು ಪ್ರಚೋದನಾಕಾರಿ ಸ್ವರೂಪದ್ದಾಗಿದ್ದವು ಎಂಬ ಉ.ಪ್ರ. ಸರಕಾರದ ವಾದವು ಸರ್ವೋಚ್ಚ ನ್ಯಾಯಾಲಯಕ್ಕೆ ಮನವರಿಕೆಯಾಗಿರಲಿಲ್ಲ.
ಈ ದಾಖಲೆಗಳು ಹಥರಾಸ್‌ನಲ್ಲಿ ಸಾಮೂಹಿಕ ಅತ್ಯಚಾರಕ್ಕೊಳಗಾಗಿ ಕೊಲೆಯಾಗಿದ್ದ ದಲಿತ ಯುವತಿಗೆ ನ್ಯಾಯವನ್ನು ಕೋರಿ ಪ್ರತಿಭಟನೆಗೆ ಕರೆ ನೀಡಿದ್ದ ಕರಪತ್ರಗಳಾಗಿದ್ದವು ಎನ್ನುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ನೇತೃತ್ವದ ಪೀಠವು, ಪ್ರತಿಯೊಬ್ಬ ವ್ಯಕ್ತಿಯೂ ಮುಕ್ತ ಅಭಿವ್ಯಕ್ತಿಯ ಹಕ್ಕನ್ನು ಹೊಂದಿದ್ದಾನೆ ಎಂದು ಹೇಳಿತು. ಸಂತ್ರಸ್ತೆಗೆ ನ್ಯಾಯ ದೊರಕಿಸುವ ಅಗತ್ಯವಿದೆ ಎಂಬ ಪರಿಕಲ್ಪನೆಯ ಪ್ರಚಾರವು ಕಾನೂನಿನ ಕಣ್ಣಿನಲ್ಲಿ ಅಪರಾಧವೇ ಎಂದು ಅದು ಪ್ರಶ್ನಿಸಿತು.
2002ರ ದಿಲ್ಲಿ ಅತ್ಯಾಚಾರ-ಕೊಲೆ ಪ್ರಕರಣದ ಬಳಿಕ ಇಂಡಿಯಾ ಗೇಟ್‌ನಲ್ಲಿ ಜನರು ಪ್ರತಿಭಟನೆ ನಡೆಸಿದ್ದರು ಮತ್ತು ಅದು ಕಾನೂನಿನಲ್ಲಿ ಬದಲಾವಣೆಗೆ ಕಾರಣವಾಗಿತ್ತು ಎಂದು ಪೀಠದ ಸದಸ್ಯರಾಗಿದ್ದ ನ್ಯಾ.ಎಸ್.ರವೀಂದ್ರ ಭಟ್ ಅವರು ಬೆಟ್ಟು ಮಾಡಿದರು.