ನವದೆಹಲಿ: ನ್ಯಾಯಾಲಯಗಳಿಗೆ ವಿವಿಧ ಮನವಿಗಳನ್ನಿಟ್ಟು ಅರ್ಜಿ ಸಲ್ಲಿಸಲಾಗುತ್ತದೆ. ಆದರೆ ಅತ್ಯಂತ ಕುತೂಹಲ ಹಾಗೂ ಖುದ್ದು ನ್ಯಾಯಮೂರ್ತಿಗಳೇ ಬಹಳಷ್ಟು ಅಚ್ಚರಿ ಪಟ್ಟುಕೊಂಡಿರುವ ಅರ್ಜಿಯೊಂದು ದೆಹಲಿ ಕೋರ್ಟ್ ಮೆಟ್ಟಿಲೇರಿದೆ.
56 ವರ್ಷ ವಯಸ್ಸಿನ ಕುಂಜ್ ಬಿಹಾರಿ ಬನ್ಸಲ್ ಎಂಬ ವ್ಯಕ್ತಿಯೊಬ್ಬರು ದೆಹಲಿ ಹೈಕೋರ್ಟ್ಗೆ ಈ ಅರ್ಜಿ ಸಲ್ಲಿಸಿದ್ದಾರೆ.
ಅದರಲ್ಲಿ ಅವರು, 'ನಾನು ಸತ್ತಮೇಲೆ ಅಂತ್ಯಸಂಸ್ಕಾರದ ವಿಧಿಗಳನ್ನು ಪೂರೈಸಲು ಕುಟುಂಬದ ಸದಸ್ಯರಿಗೆ ಅನುಮತಿ ನೀಡಬಾರದು. ನನ್ನ ಶವ ಅವರು ಮುಟ್ಟಬಾರದು. ಪತ್ನಿ, ಮಗಳು, ಅಳಿಯ ಯಾರಿಗೂ ಈ ಅಧಿಕಾರ ನೀಡಬಾರದು, ನನ್ನ ಅಂತ್ಯಕ್ರಿಯೆ ಅವರು ನಡೆಸಕೂಡದು ಎಂಬುದಾಗಿ ಆದೇಶಿಸಿ' ಎಂದು ಈ ಅರ್ಜಿಯಲ್ಲಿ ಕುಂಜ್ ಬಿಹಾರಿ ಬನ್ಸಲ್ ಮನವಿ ಮಾಡಿಕೊಂಡಿದ್ದಾರೆ.
'ನನಗೆ ಹೃದ್ರೋಗ ಇದೆ. ಯಾವಾಗ ಬೇಕಾದರೂ ಸಾಯಬಹುದು. ಆದರೆ ನನ್ನ ಮಗಳು, ಅಳಿಯ ಹಾಗೂ ಪತ್ನಿ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ನಾನು ಸತ್ತ ಮೇಲೆ ನನ್ನ ಮಕ್ಕಳು ಅಂತ್ಯಕ್ರಿಯೆ ಮಾಡಬಾರದು. ಮಗಳ ಲಾಲನೆ-ಪೋಷಣೆಯಲ್ಲಿ ಭಾಗಿಯಾಗುವ ಅವಕಾಶವನ್ನು ಪತ್ನಿ ಯಾವತ್ತೂ ತನಗೆ ನೀಡಲಿಲ್ಲ, ಅವಳ ಮದುವೆಗೂ ಆಹ್ವಾನಿಸದ ಮಟ್ಟಿಗೆ ತನ್ನನ್ನು ಕಡೆಗಣಿಸಲಾಯಿತು. ಮಗಳಾಗಲೀ, ಅಳಿಯನಾಗಲೀ ನನ್ನನ್ನು ನೋಡಿಕೊಳ್ಳುತ್ತಿಲ್ಲ. ಆದ್ದರಿಂದ ಅವರಿಗೆ ನನ್ನ ಅಂತ್ಯಕ್ರಿಯೆ ನಡೆಸುವ ಅಧಿಕಾರ ಇಲ್ಲ. ಆದರೆ ನಾನು ಮಗನಂತೆ ನೋಡಿಕೊಳ್ಳುತ್ತಿರುವ ಹಾಗೂ ನನ್ನನ್ನು ಅಪ್ಪನಂತೆ ಸಲಹುತ್ತಿರುವ ಕ್ರಿಷ್ ಎಂಬ ಯುವಕನಿಗೆ ನನ್ನ ಅಂತ್ಯಕ್ರಿಯೆಯ ಸರ್ವ ಅಧಿಕಾರ ನೀಡಬೇಕು. ಈ ರೀತಿ ಆದೇಶಿಸಿ' ಎಂದು ಅವರು ಕೋರಿದ್ದಾರೆ.
ಈ ಮನವಿಯಲ್ಲಿನ ಸಾಧಕ ಬಾಧಕಗಳನ್ನು ಪರಿಶೀಲಿಸುವಂತೆ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದ್ದಾರೆ.