HEALTH TIPS

ಸ್ವಾತಂತ್ರ್ಯ ಹೋರಾಟಗಾರರ ಪಾಸ್‌ನ ದುರ್ಬಳಕೆ ಬೆಟ್ಟು ಮಾಡಿದ ಸಿಎಜಿ

                  ನವದೆಹಲಿ:ಸಿಎಜಿ ತನ್ನ 2019ರ ವರದಿಯಲ್ಲಿ ರೈಲಿನಲ್ಲಿ ಪ್ರಯಾಣಿಸುವ ಸ್ವಾತಂತ್ರ ಹೋರಾಟಗಾರರಿಗೆ ನೀಡಲಾಗುವ ರಿಯಾಯಿತಿ ಪಾಸ್‌ಗಳ ಭಾರೀ ದುರ್ಬಳಕೆಯನ್ನು ಬೆಟ್ಟು ಮಾಡಿದ ನಂತರ ಭಾರತೀಯ ರೈಲ್ವೆ ಮತ್ತು ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ತಪ್ಪಿತಸ್ಥರ ಬೆನ್ನು ಬೀಳುವ ಬದಲು ಈ ಸಂಬಂಧ ಮಾಹಿತಿಗಳ ನೀಡಿಕೆಯನ್ನೇ ನಿರ್ಬಂಧಿಸಿದೆ.

                ಆರ್‌ಟಿಐ ಕಾರ್ಯಕರ್ತರೋರ್ವರು ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ)ಕ್ಕೆ ಸಲ್ಲಿಸಿರುವ ದೂರು ಈ ವಿಷಯವನ್ನು ಬಹಿರಂಗಗೊಳಿಸಿದೆ ಎಂದು thewire.in ವರದಿ ಮಾಡಿದೆ

               2017,ಜು.15 ಮತ್ತು 2018,ಮಾ.31ರ ನಡುವೆ ರೈಲಿನಲ್ಲಿ ಪ್ರಯಾಣಕ್ಕಾಗಿ ಸ್ವಾತಂತ್ರ ಹೋರಾಟಗಾರರ ಪಾಸ್‌ಗಳನ್ನು ಬಳಸಿದ್ದವರಲ್ಲಿ ಶೇ.21ರಷ್ಟು ಜನರು 70 ವರ್ಷಕ್ಕಿಂತ ಕೆಳಗಿನ ವಯೋಮಾನದವರಾಗಿದ್ದರು,ಹೀಗಾಗಿ ಭಾರತವು ಸ್ವತಂತ್ರಗೊಂಡ ನಂತರ ಜನಿಸಿದವರಾಗಿದ್ದರು ಎಂದು 2019,ಡಿ.9ರಂದು ಸಂಸತ್ತಿನಲ್ಲಿ ಮಂಡಿಸಲಾಗಿದ್ದ ಆಗಿನ ಸಿಎಜಿ ರಾಜೀವ ಮೆಹ್ರಿಷಿ ಅವರ ವರದಿಯಲ್ಲಿ ಬೆಟ್ಟು ಮಾಡಲಾಗಿತ್ತು.

                ಸ್ವಾತಂತ್ರ ಹೋರಾಟಗಾರರ ಸೌಲಭ್ಯಗಳ ದುರ್ಬಳಕೆಯ ವ್ಯಾಪ್ತಿಯನ್ನು ಪ್ರಮುಖವಾಗಿ ವರದಿಯಲ್ಲಿ ಬಿಂಬಿಸಿದ್ದ ಸಿಎಜಿ,ಸ್ವಾತಂತ್ರ ಹೋರಾಟಗಾರರ ಸೌಲಭ್ಯದಡಿ ರಿಯಾಯಿತಿ ಟಿಕೆಟ್ ಪಡೆದಿದ್ದ ಅತ್ಯಂತ ಕಿರಿಯ ವ್ಯಕ್ತಿಯ ವಯಸು 10 ವರ್ಷಗಳಾಗಿದ್ದವು ಎಂದು ಹೇಳಿದ್ದರು. ಸ್ವಾತಂತ್ರ ಹೋರಾಟಗಾರರ ಪಾಸ್ ಸಂಖ್ಯೆಯನ್ನು '0' ಎಂದು ತೋರಿಸಲಾಗಿದ್ದ ರಿಯಾಯಿತಿ ಟಿಕೆಟ್‌ಗಳನ್ನು ನೀಡಿದ್ದ 15 ಪ್ರಕರಣಗಳನ್ನು ಅವರು ವರದಿಯಲ್ಲಿ ಉಲ್ಲೇಖಿಸಿದ್ದರು.

               ಆರ್‌ಟಿಐ ಕಾರ್ಯಕರ್ತ ನವೀನ ಕುಮಾರ್ 2020,ಅ.15ರಂದು ಈ ವಿಷಯವನ್ನು ಪ್ರಸ್ತಾಪಿಸಿ ಅರ್ಜಿಯೊಂದನ್ನು ಸಿಎಜಿಗೆ ಸಲ್ಲಿಸಿದ್ದರು. ಆದರೆ ಸಿಎಜಿ ಆ ವರ್ಷದ ಅ.15ರಂದು ಅರ್ಜಿಯನ್ನು ಗೃಹ ಸಚಿವಾಲಯದ ಸ್ವಾತಂತ್ರ ಹೋರಾಟಗಾರರು ಮತ್ತು ಪುನರ್ವಸತಿ (ಎಫ್‌ಎಫ್‌ಆರ್) ವಿಭಾಗಕ್ಕೆ ವರ್ಗಾಯಿಸಿದ್ದರು. ನಂತರ 2020,ನ.26ರಂದು ಗೃಹ ಸಚಿವಾಲಯವು ಅರ್ಜಿಯನ್ನು ರೈಲ್ವೆ ಸಚಿವಾಲಯದ ಅಧೀನದ ರೈಲ್ವೆ ಮಂಡಳಿಗೆ ಕಳುಹಿಸಿತ್ತು.

                   ಗೃಹ ಸಚಿವಾಲಯದಿಂದ ತನ್ನ ವಿಚಾರಣೆಗಳಿಗೆ ಸ್ಪಷ್ಟ ಉತ್ತರಗಳು ಲಭಿಸದಿದ್ದಾಗ ಕುಮಾರ್ 2021,ಎ.20ರಂದು ಸಿಐಸಿಗೆ ತನ್ನ ಎರಡನೇ ಅರ್ಜಿಯನ್ನು ಸಲ್ಲಿಸಿದ್ದರು.

                     ಸಿಐಸಿ 2022,ಸೆ.6ರಂದು ರೈಲ್ವೆ ಸಚಿವಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಸ್ವೀಕರಿಸಿದ್ದ ಲಿಖಿತ ಉತ್ತರದಲ್ಲಿ,ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಯಾವುದೇ ಅಂಶವು ಈ ಸಚಿವಾಲಯಕ್ಕೆ ಸಂಬಂಧಿಸಿದ್ದಲ್ಲ. ಸಿಐಸಿ ಹೊರಡಿಸಿದ್ದ ವಿಚಾರಣೆ ನೋಟಿಸ್‌ಗಳನ್ನು ರೈಲ್ವೆ ಮಂಡಳಿಗೆ ಕಳುಹಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ ಸ್ವಾತಂತ್ರ ಹೋರಾಟಗಾರರಿಗೆ ಉಚಿತ ರೈಲ್ವೆ ಪಾಸ್‌ಗಳ ಕುರಿತು ಯಾವುದೇ ಮಾಹಿತಿಯನ್ನು ಕೋರಲಾಗಿಲ್ಲ ಎಂಬ ಉಲ್ಲೇಖದೊಂದಿಗೆ ಅದು ನೋಟಿಸ್‌ಗಳನ್ನು ಮರಳಿಸಿದೆ ಎಂದು ತಿಳಿಸಲಾಗಿತ್ತು.

                   2022,ಸೆ.12ರಂದು ಗೃಹ ಸಚಿವಾಲಯದ ಎಫ್‌ಎಫ್‌ಆರ್ ವಿಭಾಗವು ತನ್ನ ಪ್ರತಿಕ್ರಿಯೆಯನ್ನು ಸಿಐಸಿಗೆ ಸಲ್ಲಿಸಿತ್ತು. ಕೋರಲಾಗಿದ್ದ ಮಾಹಿತಿಗಳನ್ನು ನೀಡುವ ಬದಲು ಅದು ದೂರುದಾರರ ಹೆಸರು ಕೆಡಿಸಲು ಪ್ರಯತ್ನಿಸಿತ್ತು. ಆರ್‌ಟಿಐ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಳ್ಳುವುದು ನವೀನ ಕುಮಾರ ಚಾಳಿಯಾಗಿದೆ,ಅವರು ಒಂದೇ ವಿಷಯದ ಕುರಿತು ಸಿಐಸಿಗೆ ಪದೇ ಪದೇ ಅರ್ಜಿಗಳನ್ನು ಸಲ್ಲಿಸುತ್ತಿರುತ್ತಾರೆ ಎಂದು ಅದು ಹೇಳಿತ್ತು.

            ಸ್ವಾತಂತ್ರ ಹೋರಾಟಗಾರರ ಕುರಿತು ಅದೇ ವಿಷಯದಲ್ಲಿ ಅರ್ಜಿದಾರರಿಂದ ಮುಂದಿನ ಅರ್ಜಿಗಳನ್ನು ಸ್ವೀಕರಿಸಬಾರದು ಎಂದು ಸಿಐಸಿ 2021,ಆ.9ರಂದು ನಿರ್ಧರಿಸಿದ್ದನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ತನ್ನ ಆದೇಶದಲ್ಲಿ ಈ ನಿರ್ಧಾರವನ್ನು ನೆನಪಿಸಿರುವ ಮುಖ್ಯ ಮಾಹಿತಿ ಆಯುಕ್ತ ವೈ.ಕೆ.ಸಿನ್ಹಾ ಅವರು ಕುಮಾರ್ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries