ಹೈದರಾಬಾದ್: ಕೋಮುವಾದಿ ಶಕ್ತಿಗಳು ಸಮಾಜವನ್ನು ವಿಭಜಿಸಲು ಮತ್ತು ಜನರ ನಡುವೆ ದ್ವೇಷವನ್ನು ಹರಡಲು ಯತ್ನಿಸುತ್ತಿವೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಹೇಳಿದ್ದಾರೆ.
ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನವನ್ನು ಉದ್ದೇಶಿಸಿ ಮಾತನಾಡಿರುವ ಅವರು, 'ಧಾರ್ಮಿಕ ಮತಾಂಧತೆ ಬೆಳೆದರೆ ರಾಷ್ಟ್ರವೇ ನಾಶವಾಗುತ್ತದೆ ಮತ್ತು ಮಾನವ ಸಂಬಂಧಗಳು ಹದಗೆಡುತ್ತವೆ' ಎಂದು ತಿಳಿಸಿದ್ದಾರೆ.
'ಅವರು(ಕೋಮುವಾದಿಗಳು) ತಮ್ಮ ಸಂಕುಚಿತ ಹಿತಾಸಕ್ತಿಗಳಿಗಾಗಿ ಸಮಾಜದಲ್ಲಿ ಮುಳ್ಳುಗಳನ್ನು ಬಿತ್ತುತ್ತಿದ್ದಾರೆ. ತಮ್ಮ ವಿಷಕಾರಿ ಆಲೋಚನೆಗಳಿಂದ ಜನರ ನಡುವೆ ದ್ವೇಷವನ್ನು ಹರಡುತ್ತಿದ್ದಾರೆ. ಈ ರೀತಿಯ ನಡೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
'ತೆಲಂಗಾಣವು ಅತ್ಯಂತ ಪ್ರಬುದ್ಧವಾಗಿ ನಡೆದುಕೊಂಡಿದೆ. ಅದೇ ರೀತಿಯ ಕ್ರಿಯಾಶೀಲತೆ ಮತ್ತು ಬುದ್ಧಿವಂತಿಕೆಯನ್ನು ಮತ್ತೊಮ್ಮೆ ಪ್ರದರ್ಶಿಸಬೇಕಿದೆ. ರಾಷ್ಟ್ರದ ರಚನೆಯನ್ನು ಒಡೆಯಲು ಯತ್ನಿಸುತ್ತಿರುವ ಈ ದುಷ್ಟ ಮತ್ತು ಭ್ರಷ್ಟ ಶಕ್ತಿಗಳ ಕುತಂತ್ರಗಳನ್ನು ವಿಫಲಗೊಳಿಸಬೇಕಿದೆ. ಒಂದು ಕ್ಷಣ ಮೈಮರೆತರೂ ಸಮಾಜ ಛಿದ್ರಗೊಳ್ಳುವ ಅಪಾಯವಿದೆ' ಎಂದು ಕೆಸಿಆರ್ ಎಚ್ಚರಿಸಿದ್ದಾರೆ.
ತೆಲಂಗಾಣ ಸರ್ಕಾರವು ಸೆಪ್ಟೆಂಬರ್ 17 ಅನ್ನು ತೆಲಂಗಾಣ ರಾಷ್ಟ್ರೀಯ ಏಕೀಕರಣ ದಿನ ಎಂದು ಆಚರಿಸಿದರೆ, ಕೇಂದ್ರವು ಅದನ್ನು ಹೈದರಾಬಾದ್ ವಿಮೋಚನಾ ದಿನ ಎಂದು ಹೆಸರಿಸಿದೆ.