ನವದೆಹಲಿ:ದೂರಗಾಮಿ ಪರಿಣಾಮಗಳನ್ನು ಬೀರಬಲ್ಲ ಕ್ರಮವೊಂದರಲ್ಲಿ ಕೇಂದ್ರವು ಹಿಂದು, ಬೌದ್ಧ ಮತ್ತು ಸಿಖ್ ಧರ್ಮಗಳನ್ನು ಹೊರತುಪಡಿಸಿ ಇತರ ಧರ್ಮಗಳಿಗೆ ಮತಾಂತರಗೊಂಡ ಪರಿಶಿಷ್ಟ ಜಾತಿಗಳಿಗೆ(Scheduled Castes) ಸೇರಿದವರು ಅಥವಾ ದಲಿತರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯ ಅಧ್ಯಯನಕ್ಕಾಗಿ ರಾಷ್ಟ್ರೀಯ ಆಯೋಗವೊಂದನ್ನು ರಚಿಸಲು ಸಜ್ಜಾಗಿದೆ ಎಂದು indianexpress.com ವರದಿ ಮಾಡಿದೆ.
ಇಂತಹ ಆಯೋಗವೊಂದನ್ನು ರಚಿಸುವ ಪ್ರಸ್ತಾವ ಕೇಂದ್ರದಲ್ಲಿ ಚರ್ಚೆಯಾಗುತ್ತಿದ್ದು, ಶೀಘ್ರವೇ ನಿರ್ಧಾರವೊಂದನ್ನು ಕೈಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
ಕ್ರಿಶ್ಚಿಯನ್(Christianity) ಅಥವಾ ಇಸ್ಲಾಮ್(Islam) ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಮೀಸಲಾತಿ ಸೌಲಭ್ಯಗಳನ್ನು ಕೋರಿ ಹಲವಾರು ಅರ್ಜಿಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯುಳಿದಿರುವ ಹಿನ್ನೆಲೆಯಲ್ಲಿ ಇಂತಹ ಆಯೋಗ ರಚನೆಯ ಕ್ರಮವು ಮಹತ್ವವನ್ನು ಪಡೆದುಕೊಂಡಿದೆ.
ಹಿಂದು, ಬೌದ್ಧ ಮತ್ತು ಸಿಖ್ ಧರ್ಮಗಳಿಗೆ ಹೊರತಾಗಿ ಇತರ ಧರ್ಮವನ್ನು ಆಚರಿಸುವವರನ್ನು ಪರಿಶಿಷ್ಟ ಜಾತಿಯ ಸದಸ್ಯರೆಂದು ಪರಿಗಣಿಸುವಂತಿಲ್ಲ ಎಂದು ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶ,1950ರ 341ನೇ ವಿಧಿಯಡಿ ಸ್ಪಷ್ಟಪಡಿಸಲಾಗಿದೆ. ಹಿಂದುಗಳನ್ನು ಮಾತ್ರ ಎಸ್‌ಸಿಗಳು ಎಂದು ವರ್ಗೀಕರಿಸಿದ್ದ ಮೂಲ ಆದೇಶಕ್ಕೆ ಸಿಕ್ಖರನ್ನು ಸೇರ್ಪಡೆಗೊಳಿಸಲು 1956ರಲ್ಲಿ ಮತ್ತು ಬೌದ್ಧರನ್ನು ಸೇರ್ಪಡೆಗೊಳಿಸಲು 1990ರಲ್ಲಿ ತಿದ್ದುಪಡಿಗಳನ್ನು ತರಲಾಗಿತ್ತು.
ಅರ್ಜಿದಾರರು ಎತ್ತಿರುವ ವಿಷಯದ ಕುರಿತು ಸರಕಾರದ ನಿಲುವನ್ನು ತಾನು ದಾಖಲಿಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆ.30ರಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು. ಇದಕ್ಕಾಗಿ ಅವರಿಗೆ ಮೂರು ವಾರಗಳ ಸಮಯಾವಕಾಶವನ್ನು ಮಂಜೂರು ಮಾಡಿರುವ ನ್ಯಾಯಾಲಯವು ವಿಚಾರಣೆಯನ್ನು ಅ.11ಕ್ಕೆ ನಿಗದಿಗೊಳಿಸಿದೆ.
ಉದ್ದೇಶಿತ ಆಯೋಗವು ಕೇಂದ್ರ ಸಂಪುಟ ಸಚಿವ ಸ್ಥಾನಮಾನ ಹೊಂದಿರುವ ಅಧ್ಯಕ್ಷರೊಂದಿಗೆ ಮೂರು ಅಥವಾ ನಾಲ್ಕು ಸದಸ್ಯರನ್ನು ಒಳಗೊಂಡಿರಬಹುದು ಮತ್ತು ಅದಕ್ಕೆ ತನ್ನ ವರದಿಯನ್ನು ಸಲ್ಲಿಸಲು ಒಂದು ವರ್ಷಕ್ಕಿಂತ ಹೆಚ್ಚಿನ ಕಾಲಾವಕಾಶವನ್ನು ಪಡೆಯಬಹುದು ಎಂದು ತಿಳಿದುಬಂದಿದೆ.
ಉದ್ದೇಶಿತ ಆಯೋಗವು ಕ್ರಿಶ್ಚಿಯನ್ ಅಥವಾ ಇಸ್ಲಾಮ್‌ಗೆ ಮತಾಂತರಗೊಂಡಿರುವ ದಲಿತರ ಸ್ಥಿತಿಗತಿಗಳಲ್ಲಿ ಬದಲಾವಣೆಗಳನ್ನು ದಾಖಲಿಸುವ ಜೊತೆಗೆ ಪ್ರಸ್ತುತ ಎಸ್‌ಸಿ ಪಟ್ಟಿಗೆ ಹೆಚ್ಚಿನ ಸದಸ್ಯರನ್ನು ಸೇರಿಸುವುದರ ಪರಿಣಾಮದ ಕುರಿತೂ ಅಧ್ಯಯನವನ್ನು ನಡೆಸಲಿದೆ ಎಂದು indianexpress.com ವರದಿ ಮಾಡಿದೆ.
ಪರಿಶಿಷ್ಟ ವರ್ಗಗಳು (ಎಸ್‌ಟಿ) ಮತ್ತು ಇತರ ಹಿಂದುಳಿದ ವರ್ಗ (ಒಬಿಸಿ)ಗಳು ಯಾವುದೇ ನಿರ್ದಿಷ್ಟ ಧರ್ಮ ಸೂಚಿತವಲ್ಲ, ಹೀಗಾಗಿ ಈ ವಿಷಯವು ದಲಿತರಿಗೆ ಮಾತ್ರ ಸೀಮಿತವಾಗಿದೆ. ಪರಿಶಿಷ್ಟ ವರ್ಗಕ್ಕೆ ಸೇರಿದ ವ್ಯಕ್ತಿಯ ಹಕ್ಕುಗಳು ಆತನ/ಆಕೆಯ ಧಾರ್ಮಿಕ ನಂಬಿಕೆಗಳಿಂದ ಸ್ವತಂತ್ರವಾಗಿವೆ ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ. ಅಲ್ಲದೆ ಮಂಡಲ ಆಯೋಗದ ವರದಿಯ ಜಾರಿಯ ಬಳಿಕ ಹಲವಾರು ಕ್ರಿಶ್ಚಿಯನ್ ಮತ್ತು ಮುಸ್ಲಿಂ ಸಮುದಾಯಗಳು ಕೇಂದ್ರ ಅಥವಾ ರಾಜ್ಯಗಳ ಒಬಿಸಿ ಪಟ್ಟಿಗಳಲ್ಲಿ ಸ್ಥಾನ ಪಡೆದುಕೊಂಡಿವೆ.