ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ “ವಿಂಶತಿ ಕಾರ್ಯಕ್ರಮ” ದ ಅಂಗವಾಗಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು, ಡಾ.ದಯಾನಂದ ಪೈ ಮತ್ತು ಪಿ ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಮತ್ತು ಒನ್‍ಸೈಟ್ ಎಸ್ಸಿಲೋರ್‍ಲುಕ್ಷೋಟಿಕಾ ಫೌಂಡೇಶನ್ ಬೆಂಗಳೂರು ಸಹಯೋಗದಲ್ಲಿ ಕೊಂಡೆವೂರು ಮಠದಲ್ಲಿ “ಉಚಿತ ನೇತ್ರ ತಪಾಸಣಾ ಶಿಬಿರ” ಭಾನುವಾರ ಆಯೋಜಿಸಲಾಗಿತ್ತು.
ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈದು ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಕಣ್ಣಿನ ಆರೋಗ್ಯ ಅತೀ ಅಗತ್ಯ. ಈ ನಿಟ್ಟಿನಲ್ಲಿ ಪ್ರಸಾದ್ ನೇತ್ರಾಲಯದ ಸೇವಾದೃಷ್ಟಿ ಅನುಕರಣೀಯ ಎಂದರಲ್ಲದೆ ನಾವೆಲ್ಲರೂ ಹೃದಯದ ದೃಷ್ಟಿಕೋನದಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು ಮತ್ತು “ಶ್ರೀಮಠದ ವಿಂಶತಿ ವರ್ಷದ ಅಂಗವಾಗಿ ಆರ್ಥಿಕ ತೊಂದರೆಯ 20 ಜನರ ಕಣ್ಣಿನ ಶಸ್ತ್ರಚಿಕಿತ್ಸಾ ವೆಚ್ಚವನ್ನು ಮಠ ಭರಿಸುತ್ತದೆ ಎಂದು ಘೋಷಿಸಿದರು.
ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್‍ನ ವಿಶ್ವಸ್ಥ ಶಶಿಧರ ಶೆಟ್ಟಿ ಗ್ರಾಮಚಾವಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಸಾದ್ ನೇತ್ರಾಲಯದ ಹಿರಿಯ ನೇತ್ರತಜ್ಞೆ ಡಾ.ವೃಂದಾ, ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್‍ನ ವಿಶ್ವಸ್ಥರುಗಳಾದ ಪಿ.ಆರ್.ಶೆಟ್ಟಿ ಕುಳೂರು ಮತ್ತು ಮೋಹನದಾಸ್ ಕೊಂಡೆವೂರು ಉಪಸ್ಥಿತರಿದ್ದು ಶುಭ ಹಾರೈಸಿದರು. ಡಾ. ಜಯಪ್ರಕಾಶ್ ನಾರಾಯಣ್ ತೊಟ್ಟೆತ್ತೋಡಿ ಸ್ವಾಗತಿಸಿ, ಸರ್ವೇಶ್ ಕೋರಂಬಳ ವಂದಿಸಿದರು.
ಶಿಬಿರದಲ್ಲಿ 300 ಕ್ಕೂ ಅಧಿಕ ಮಂದಿ ಕಣ್ಣು ಪರೀಕ್ಷೆಗಾಗಿ ಹೆಸರು ನೋಂದಾಯಿಸಿ, ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಈ ಪೈಕಿ ಅಗತ್ಯವುಳ್ಳ 54 ಮಂದಿಗೆ ಪ್ರಸಾದ್ ನೇತ್ರಾಲಯದಲ್ಲಿ ಉನ್ನತ ತಪಾಸಣೆಗಾಗಿ, ಮಂಗಳವಾರ ಕೊಂಡೆವೂರು ಮಠಕ್ಕೆ ಆಗಮಿಸುವಂತೆ ಸೂಚಿಸಿದೆ. ಅಕ್ಟೋಬರ್ 12 ರಂದು ಬುಧವಾರ ಮಧ್ಯಾಹ್ನ 12. ಕ್ಕೆ ಅಗತ್ಯವಿರುವ 206 ಮಂದಿಗೆ ಕೊಂಡೆವೂರು ಮಠದಲ್ಲಿ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಲಿದೆ.