ನವದೆಹಲಿ:ಭಾರತದಲ್ಲಿ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ.
ಭಾಷೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವುದು ನೀತಿ ನಿರ್ಧಾರವಾಗಿದೆ. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯ ಇದೆ.
ಆದುದರಿಂದ ನ್ಯಾಯಾಲಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಕೃಷ್ಣ ಮುರಾರಿ ಅವರನ್ನು ಒಳಗೊಂಡ ಪೀಠ ಮನವಿ ಸ್ವೀಕರಿಸಲು ನಿರಾಕರಿಸಿತು.
''ಭಾರತದ ಎಷ್ಟು ನಗರಗಳಲ್ಲಿ ಸಂಸ್ಕೃತ ಮಾತನಾಡುತ್ತಾರೆ? ನಿಮಗೆ ಸಂಸ್ಕೃತ ತಿಳಿದಿದೆಯೇ? ನೀವು ಒಂದು ಸಾಲು ಸಂಸ್ಕೃತವನ್ನು ಪಠಿಸಬಹುದೇ? ಅಥವಾ ನಿಮ್ಮ ರಿಟ್ ಅರ್ಜಿಯ ಮನವಿಯನ್ನು ಸಂಸ್ಕೃತಕ್ಕೆ ಭಾಷಾಂತರಿಸಬಹುದೇ?'' ಎಂದು ಅದು ಪ್ರಶ್ನಿಸಿತು.
ಸಂಸ್ಕೃತ ಮಾತೃ ಭಾಷೆ. ಇದರಿಂದ ಇತರ ಭಾಷೆಗಳು ಪ್ರೇರಣೆ ಪಡೆದುಕೊಂಡಿವೆ ಎಂದು ದೂರುದಾರ ಪರ ವಕೀಲರು ಹೇಳಿದರು.
ಮನವಿಯನ್ನು ಸ್ವೀಕರಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್, ದೂರುದಾರರು ತನ್ನ ಅಭಿಪ್ರಾಯವನ್ನು ಸರಕಾರದ ಮುಂದೆ ಸಲ್ಲಿಸುವ ಸ್ವಾತಂತ್ರ್ಯ ಇದೆ ಎಂದು ಹೇಳಿತು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ವಕೀಲ ಕೆ.ಜಿ. ವಂಝಾರ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.