ತಿರುವನಂತಪುರಂ: ದೇಶದಲ್ಲಿ ಉಗ್ರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಆರೋಪದ ಮೇರೆಗೆ ಗುರುವಾರ ರಾಷ್ಟ್ರೀಯ ತನಿಖಾ ದಳ ಪಿಎಫ್ ಐ ಸಂಘಟನೆಯ ಮುಖಂಡರ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಬಂಧಿಸಿರುವುದನ್ನು ವಿರೋಧಿಸಿ ಸಂಘಟನೆ ಇಂದು ಕರೆ ನೀಡಿರುವ ಬಂದ್ ಹಿಂಸಾಚಾರಕ್ಕೆ ತಿರುಗಿದೆ.
ತಿರುವನಂತಪುರಂ, ಕೊಲ್ಲಂ, ಕೊಝಿಕೋಡ್, ವೈನಾಡು ಮತ್ತು ಆಲಪ್ಪುಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕಣ್ಣೂರು ಜಿಲ್ಲೆಯಲ್ಲಿ ಇಂದು ಬೆಳಗ್ಗೆ ನ್ಯೂಸ್ ಪೇಪರ್ ಕೊಂಡೊಯ್ಯುತ್ತಿದ್ದ ವಾಹನವೊಂದ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆಲಪ್ಪುಳದಲ್ಲಿ ಕೆಎಸ್ ಆರ್ ಟಿಸಿ ಬಸ್ ಗಳು, ಟ್ಯಾಂಕರ್ ಲಾರಿ ಮತ್ತಿತರ ವಾಹನಗಳ ಮೇಲೆ ಕಲ್ಲು ಎಸೆತದಿಂದ ಹಾನಿಯಾಗಿವೆ. ಕೋಝಿಕೋಡ್ ಮತ್ತು ಕಣ್ಣೂರಿನಲ್ಲಿ ಕ್ರಮವಾಗಿ ಪಿಎಫ್ ಐ ಕಾರ್ಯಕರ್ತರ ಕಲ್ಲು ಎಸೆತದಿಂದ 15 ವರ್ಷದ ಬಾಲಕಿ ಹಾಗೂ ಆಟೋ ರೀಕ್ಷಾ ಚಾಲಕರೊಬ್ಬರಿಗೆ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ.
ಈ ಮಧ್ಯೆ ಕೇರಳ ಪೊಲೀಸರು ರಾಜ್ಯಾದ್ಯಂತ ಬಿಗಿ ಭದ್ರತೆ ಒದಗಿಸಿದ್ದು, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ.