ರಾಜ್ಯದ ಕೆಲವು ಶಾಲಾ-ಕಾಲೇಜುಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್(Hijab) ಧರಿಸುವುದನ್ನು ನಿಷೇಧಿಸಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಆಲಿಸುತ್ತಿರುವ ಸುಪ್ರೀಂ ಕೋರ್ಟ್(Supreme Court) 'ಸೆಕ್ಯುಲರಿಸಂ'(ಜಾತ್ಯತೀತತೆ) ಎಂಬ ಪದವು ಭಾರತದ ಮೂಲ ಸಂವಿಧಾನದ ಭಾಗವಾಗಿಲ್ಲ ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಪೀಠವು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.
ಸಾರ್ವಜನಿಕವಾಗಿ ಧರ್ಮದ ಪ್ರದರ್ಶನವನ್ನು ನಿಷೇಧಿಸುವ ಬಗ್ಗೆ ಸಂವಿಧಾನ ಸಭೆಯಲ್ಲಿ ಚರ್ಚಿಸಲಾಗಿತ್ತು. ಈ ವಿಷಯಕ್ಕೆ ಸರಕಾರ ಈಗ ಮತ್ತೆ ಜೀವ ತುಂಬುತ್ತಿದೆ ಎಂದು ದೇವದತ್ ಕಾಮತ್ ಅವರು ವಾದಿಸಿದಾಗ, ನ್ಯಾಯಮೂರ್ತಿ ಗುಪ್ತಾ ಅವರು, ಮೂಲ ಸಂವಿಧಾನದಲ್ಲಿ ಸೆಕ್ಯುಲರಿಸಂ ಎಂಬ ಪದ ಇಲ್ಲ ಎಂದು ಹೇಳಿದ್ದಾರೆ.
'ಜಾತ್ಯತೀತತೆ (ಸೆಕ್ಯುಲರಿಸಂ) ಎಂಬ ಪದವು ಮೂಲ ಸಂವಿಧಾನದಲ್ಲಿಲ್ಲ, ಆದರೆ (ಜಾತ್ಯಾತೀತತೆಯ) ಅದರ ಆಶಯವಿದೆʼ ಎಂದು ಕಾಮತ್ ಉತ್ತರಿಸಿದರು.
"ನಾನು ಪದದ ಬಗ್ಗೆ ಮಾತನಾಡುತ್ತಿದ್ದೇನೆ" ಎಂದು ಹೇಳಿದ ನ್ಯಾಯಮೂರ್ತಿ ಗುಪ್ತಾ, '(ಸಂವಿಧಾನದಲ್ಲಿ ಜಾತ್ಯಾತೀತತೆಯ) ಪದ ಇಲ್ಲದಿದ್ದರೂ ಸಹ, ನಾವು ಜಾತ್ಯತೀತರು. ಜಾತ್ಯತೀತತೆ ಮತ್ತು ಸಮಾಜವಾದ ಎಂಬ ಪದಗಳನ್ನು ನಂತರ ರಾಜಕೀಯ ಕಾರಣಗಳಿಗಾಗಿ ಸಂವಿಧಾನದಲ್ಲಿ ಸೇರಿಸಲಾಯಿತು' ಎಂದರು.
(ಸಾರ್ವಜನಿಕವಾಗಿ ಧರ್ಮದ ಪ್ರದರ್ಶನವನ್ನು ನಿಷೇಧಿಸುವ) ತಿದ್ದುಪಡಿಯನ್ನು ಸಂವಿಧಾನ ಸಭೆಯು ಏಕೆ ತಿರಸ್ಕರಿಸಿತು ಎಂಬ ವಾದಗಳನ್ನು ಬಳಿಕ ನ್ಯಾಯಾಲಯವು ಆಲಿಸಿತು. ಸಂವಿಧಾನ ಸಭೆಯಲ್ಲಿ ನಡೆದ ಚರ್ಚೆಯನ್ನು ದಾಖಲೆಯಾಗಿ ಇರಿಸಿದ ವಕೀಲ ಕಾಮತ್, (ಸಂವಿಧಾನ ಸಭೆಯಲ್ಲಿ ಸಾರ್ವಜನಿಕವಾಗಿ ಧರ್ಮಗಳ ಪ್ರದರ್ಶನವನ್ನು ನಿಷೇಧಿಸುವ) ತಿದ್ದುಪಡಿಗಳ ಅಗತ್ಯವಿಲ್ಲ ಎಂದು ತಿರಸ್ಕರಿಸಿದವರು ಬಿ.ಆರ್.ಅಂಬೇಡ್ಕರ್ ಎಂದು ತಿಳಿಸಿದರು.