ನವದೆಹಲಿ : ದೇಶದಲ್ಲಿ ಸಾಮಾನ್ಯ ಸಂತಾನೋತ್ಪತ್ತಿ ದರ (ಜನರಲ್ ಫರ್ಟಿಲಿಟಿ ರೇಟ್) ಕಳೆದ ಹತ್ತು ವರ್ಷಗಳಲ್ಲಿ ಶೇಕಡ 20ರಷ್ಟು ಕುಸಿದಿರುವುದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.
ಫಲವತ್ತತೆ ದರ ಅಥವಾ ಸಂತಾನೋತ್ಪತ್ತಿ ದರ ಎಂದರೆ ಸಂತಾನೋತ್ಪತ್ತಿ ಸಾಮರ್ಥ್ಯದ (15-49) ವಯೋಮಾನದ 1000 ಮಹಿಳೆಯರಿಗೆ ಜನಿಸಿದ ಮಕ್ಕಳ ಸಂಖ್ಯೆ.
2008-2010ರ ಅವಧಿಯಲ್ಲಿ ದೇಶದ ಜಿಎಫ್‍ಆರ್ 86.1ರಷ್ಟಿತ್ತು. ಇದು 2018-20ರ ಅವಧಿಯಲ್ಲಿ 68.7ಕ್ಕೆ ಕುಸಿದಿದೆ ಎಂದು ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟಂ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಫಲವತ್ತತೆ ದರ ಕುಸಿತ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು. ಗ್ರಾಮೀಣ ಪ್ರದೇಶದಲ್ಲಿ ಈ ಅವಧಿಯಲ್ಲಿ ಶೇಕಡ 20.2ರಷ್ಟು ಕುಸಿತ ದಾಖಲಾಗಿದ್ದರೆ, ನಗರ ಪ್ರದೇಶಗಳಲ್ಲಿ ಕುಸಿತ ಪ್ರಮಾಣ ಶೇಕಡ 15.6ರಷ್ಟಾಗಿದೆ.
ಜಿಎಫ್‍ಆರ್ ಕುಸಿದಿರುವುದು ಜನಸಂಖ್ಯಾ ಪ್ರಗತಿ ಇಳಿಕೆಯ ಸೂಚಕ. ಇದು ಉತ್ತಮ ಬೆಳವಣಿಗೆ. ಮಹಿಳೆಯರ ವಿವಾಹದ ವಯಸ್ಸು ಹೆಚ್ಚಿರುವುದು, ಸಾಕ್ಷರತೆ ಪ್ರಮಾಣ ಹೆಚ್ಚಳ, ಆಧುನಿಕ ಗರ್ಭನಿರೋಧಕ ವಿಧಾನಗಳ ಸುಲಭ ಲಭ್ಯತೆ ಈ ಬದಲಾವಣೆಗೆ ಪ್ರಮುಖ ಕಾರಣ ಎಂದು ಎಐಐಎಂಎಸ್‍ನ ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥೆ ಡಾ.ಸುನೀತಾ ಮಿತ್ತಲ್ ವಿಶ್ಲೇಷಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಈ ಇಳಿಕೆ ಪ್ರಮಾಣ ಅತ್ಯಧಿಕ (ಶೇಕಡ 29.2). ದೆಹಲಿ (28.5), ಉತ್ತರ ಪ್ರದೇಶ (24), ಜಾರ್ಖಂಡ್ (24), ರಾಜಸ್ಥಾನ (23.2) ನಂತದ ಸ್ಥಾನಗಳಲ್ಲಿವೆ. ಮಹಾರಾಷ್ಟ್ರದಲ್ಲಿ ಕಳೆದ ಎರಡು ದಶಕಗಳಿಂದ ಜಿಎಫ್‍ಆರ್ ಶೇಕಡ 18.6ರಷ್ಟು ಕಡಿಮೆಯಾಗಿದೆ.
ದೇಶದಲ್ಲಿ ಒಟ್ಟು ಫಲವತ್ತತೆ ದರ (ಸಂತಾನೋತ್ಪತ್ತಿ ವಯಸ್ಸಿನಲ್ಲಿ ಪ್ರತಿ ಮಹಿಳೆಯರಿಗೆ ಹುಟ್ಟುವ ಮಕ್ಕಳ ಸಂಖ್ಯೆ) 2 ಆಗಿದ್ದು, ಬಿಹಾರದಲ್ಲಿ ಗರಿಷ್ಠ ಟಿಎಫ್‍ಆರ್ (3.0) ಇದ್ದರೆ ದೆಹಲಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಇದು ಕನಿಷ್ಠ (1.4) ಎಂದು ಎಸ್‍ಆರ್‌ಎಸ್ ಅಂಕಿ ಅಂಗಳಿಂದ ತಿಳಿದುಬಂದಿದೆ. ಈ ಬಗ್ಗೆ timesofindia.com ವರದಿ ಮಾಡಿದೆ.