ಕೊಚ್ಚಿ: ಕಾಂಗ್ರೆಸ್ ನೇತೃತ್ವದ 'ಭಾರತ್ ಜೋಡೋ ಯಾತ್ರೆ'ಗಾಗಿ ಕೇರಳದ ವಿವಿಧೆಡೆ ರಸ್ತೆ ಬದಿಗಳಲ್ಲಿ ಫ್ಲೆಕ್ಸ್ ಬೋರ್ಡ್ಗಳು ಹಾಗೂ ಬ್ಯಾನರ್ಗಳನ್ನು ಸ್ಥಾಪಿಸಿರುವುದನ್ನು ಕೇರಳ ಹೈಕೋರ್ಟ್ ಶುಕ್ರವಾರ ಬಲವಾಗಿ ಟೀಕಿಸಿದೆ. ಪೊಲೀಸರು ಸೇರಿದಂತೆ ಸರಕಾರಿ ಇಲಾಖೆಗಳು ಈ ಬಗ್ಗೆ ಕುರುಡಾಗಿವೆಯೆಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.
ಈ ದೇಶದ ಭವಿಷ್ಯದ ಉಸ್ತುವಾರಿ ಹೊಂದಿರುವ ವ್ಯಕ್ತಿಗಳು ಹಾಗೂ ಸಂಸ್ಥೆಗಳು, ನ್ಯಾಯಾಲಯದ ಆದೇಶಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಯಾವುದೇ ಗೌರವವನ್ನು ನೀಡಿಲ್ಲವೆಂದು ಕೇರಳ ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಗುರುವಾರ ಸಂಜೆ ಹೊರಡಿಸಿದ ಆದೇಶವೊಂದರಲ್ಲಿ ಕಟುವಾಗಿ ಹೇಳಿದ್ದಾರೆ.
ನ್ಯಾಯಾಲಯದ ಆಪ್ತ (ಆಯಮಿಕಸ್ ಕ್ಯೂರಿ) ಹರೀಶ್ ವಾಸುದೇವನ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಿರ್ದಿಷ್ಟ ರಾಜಕೀಯ ಪಕ್ಷವೊಂದು ನಡೆಸುತ್ತಿರುವ ರ್ಯಾಲಿಗಾಗಿ ಕೇರಳಾದ್ಯಂತ ನಾಮಫಲಕ,ಬ್ಯಾನರ್ಗಳು, ಧ್ವಜಗಳ ಹಾಗೂ ಇತರ ಸಾಮಾಗ್ರಿಗಳನ್ನು ಅಕ್ರಮವಾಗಿ ಸ್ಥಾಪಿಸಿರುವುದಾಗಿ ವಾಸುದೇವ್ ಅವರು ಅರ್ಜಿಯಲ್ಲಿ ಆರೋಪಿಸಿದ್ದರು. ಇದಕ್ಕೆ ಪುರಾವೆಯಾಗಿ ಅವರು ಕೆಲವು ಛಾಯಾಚಿತ್ರಗಳನ್ನು ಕೂಡಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
''ತಿರುವನಂತಪುರದಿಂದ ತ್ರಿಶೂರ್ವರೆಗೆ ರಾಷ್ಟ್ರೀಯ ಹೆದ್ದಾರಿಯ ಎಲ್ಲಾ ಕಡೆಗಳಲ್ಲಿ ಮತ್ತು ಅದರಾಚೆಗೂ ನಿರ್ದಿಷ್ಟ ರಾಜಕೀಯ ಪಕ್ಷವೊಂದು ಅಕ್ರಮವಾಗಿ ಸಾಮಾಗ್ರಿಗಳನ್ನು ಅಳವಡಿಸಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಇತರ ಶಾಸನಾತ್ಮಕ ಸಂಸ್ಥೆಗಳಿಗೆ ಈ ಬಗ್ಗೆ ಸಂಪೂರ್ಣ ಅರಿವಿದ್ದರೂ, ಅವು ಕುರುಡಾಗಿ ವರ್ತಿಸುತ್ತಿವೆ ಎಂದು ನ್ಯಾಯಾಲಯ ಹೇಳಿದೆ.
ಈ ಸಾಮಾಗ್ರಿಗಳನ್ನು ಅಕ್ರಮವಾಗಿ ಹೇಗೆ ಅಳವಡಿಸಲಾಯಿತು ಹಾಗೂ ಯಾಕೆ ಅವುಗಳನ್ನು ತೆಗೆದುಹಾಕಲಾಗಿಲ್ಲ ಎಂಬ ಬಗ್ಗೆ ಶುಕ್ರವಾರ ಮಧ್ಯಾಹ್ನದೊಳಗೆ ಉತ್ತರಿಸುವಂತೆಯೂ ನ್ಯಾಯಾಲಯವು ಸ್ಥಳೀಯಾಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಪೊಲೀಸ್ ವರಿಷ್ಠರಿಗೆ ನಿರ್ದೇಶನ ನೀಡಿದೆ. ಈ ಅಧಿಕೃತ ಪ್ರತಿವಾದಿಗಳು ಉತ್ತರವನ್ನು ನೀಡುವವರೆಗೂ, ಜಾಹೀರಾತು ಏಜೆನ್ಸಿ ಹಾಗೂ ಮುದ್ರಣ ಸಂಸ್ಥೆಯ ಹೆಸರು ಅಥವಾ ವಿಳಾಸವನ್ನು ಮುದ್ರಿಸಿರದ ಪ್ರತಿಯೊಂದು ನಾಮಫಲಕವನ್ನು ಅಕ್ರಮವೆಂದು ಪರಿಗಣಿಸಬೇಕು ಹಾಗೂ ಅವುಗಳ ವಿರುದ್ಥ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ತಿಳಿಸಿದೆ.
ಇಂತಹ ಕೃತ್ಯಗಳನ್ನು ನಿಷೇಧಿಸಿ ನಿರ್ದಿಷ್ಟ ಅಧಿಸೂಚನೆಗಳನ್ನು ರಸ್ತೆ ಸುರಕ್ಷತಾ ಇಲಾಖೆಯು ಜಾರಿಗೊಳಿಸಿದರೂ ರಾಜ್ಯ ಸರಕಾರವು ಸುತ್ತೋಲೆಗಳನ್ನು ಜಾರಿಗೊಳಿಸಿದೆ ಎಂದು ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿದೆ.