ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ದೇಶದಲ್ಲಿ ದ್ವೇಷಮತ್ತು ಕ್ರೋಧ ಹೆಚ್ಚಾಗುತ್ತಿದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಉದ್ದೇಶಪೂರ್ವಕವಾಗಿ ದ್ವೇಷ ಹರಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.
ಅಗತ್ಯ ವಸ್ತುಗಳ ಬೆಲೆ ಏರಿಕೆ ಯನ್ನು ಖಂಡಿಸುವ ಸಲುವಾಗಿ ಕಾಂಗ್ರೆಸ್ ಇಲ್ಲಿನ ರಾಮ ಲೀಲಾ ಮೈದಾನ ದಲ್ಲಿ ಭಾನುವಾರ ಆಯೋಜಿಸಿದ್ದ 'ಮಹಂಗಾಯಿ ಪೆ ಹಲ್ಲಾ ಬೋಲ್' (ಬೆಲೆ ಏರಿಕೆ ವಿರುದ್ಧ ದನಿ ಏರಿಕೆ) ರ‍್ಯಾಲಿಯಲ್ಲಿ ರಾಹುಲ್ ಈ ಮಾತನ್ನು ಹೇಳಿದ್ದಾರೆ.
ಸಾವಿರಾರು ಜನರು ಸೇರಿದ್ದ ಈ ರ‍್ಯಾಲಿಯಲ್ಲಿ ಕಾಂಗ್ರೆಸ್‌ನ ಮುಖಂಡರು, ಮುಖ್ಯಮಂತ್ರಿಗಳು, ಸಂಸದರು ಭಾಗಿಯಾಗಿದ್ದರು. ಈ ಎಲ್ಲರೂ ಕೇಂದ್ರದ ವಿರುದ್ಧ ಹರಿಹಾಯ್ದರು.
'ದ್ವೇಷವು ಭಯದ ಒಂದು ರೂಪ. ಯಾವುದಾದರೂ ಭಯವಿದ್ದರೆ ಮಾತ್ರ ದ್ವೇಷ ಉಂಟಾಗುತ್ತದೆ. ದೇಶದ ಬಡವರಲ್ಲಿ, ಯುವಜನರಲ್ಲಿ, ಕಾರ್ಮಿಕರಲ್ಲಿ ಭವಿಷ್ಯದ ಭಯ ಕಾಡುತ್ತಿದೆ. ಬೆಲೆ ಏರಿಕೆ ಅವರನ್ನು ಹೆದರಿಸುತ್ತಿದೆ ಮತ್ತು ನಿರುದ್ಯೋಗದ ಭಯವೂ ಅವರನ್ನು ಕಾಡುತ್ತಿದೆ. ಆ ಭಯವೆಲ್ಲಾ ದ್ವೇಷ ಮತ್ತು ಕ್ರೋಧವಾಗಿ ಬದಲಾಗಿದೆ. ದೇಶದ ಇಬ್ಬರು ದೊಡ್ಡ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಬಿಜೆಪಿ ಸರ್ಕಾರವು ಈ ರೀತಿಯ ಭಯವನ್ನು ಸೃಷ್ಟಿಸಿದೆ' ಎಂದು ರಾಹುಲ್ ಅವರು ಆರೋಪಿಸಿದ್ದಾರೆ.
'ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳಿಂದಾಗಿ ಇಬ್ಬರು
ಉದ್ಯಮಿಗಳಿಗಷ್ಟೇ ಅನುಕೂಲವಾಗುತ್ತಿದೆ. ಹೀಗಾಗಿ ಆ ಉದ್ಯಮಿಗಳು ಏನು ಬೇಕು ಎಂದು
ಬಯಸುತ್ತಾರೋ ಅವೆಲ್ಲವೂ ಅವರಿಗೆ ಸಿಗುತ್ತಿದೆ. ದೇಶದ ವಿಮಾನ ನಿಲ್ದಾಣಗಳು, ಬಂದರು ಗಳು,
ದೂರಸಂಪರ್ಕ ಕ್ಷೇತ್ರ, ರಸ್ತೆ-ಹೆದ್ದಾರಿ
ಗಳು ಎಲ್ಲವೂ ಆ ಇಬ್ಬರು ಉದ್ಯಮಿಗಳ ತೆಕ್ಕೆಯಲ್ಲಿವೆ. ಬೇರೆ ಸಣ್ಣ-ಪುಟ್ಟ ಉದ್ಯಮಿ ಗಳಿಗೆ ಅವಕಾಶವೇ ಇಲ್ಲದಂತಾಗಿದೆ' ಎಂದು ರಾಹುಲ್ ದೂರಿದ್ದಾರೆ.
'2014ರಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ₹450 ಇತ್ತು, ಈಗ ಅದು ₹1,050ಕ್ಕೆ ಏರಿದೆ. ಪೆಟ್ರೋಲ್, ಡೀಸೆಲ್, ಅಕ್ಕಿ-ಬೇಳೆ ಎಲ್ಲದರ ಬೆಲೆ ಹೆಚ್ಚಾಗಿದೆ. ದೇಶದ ಜನರು ಒಂದೆಡೆ ನಿರುದ್ಯೋಗ, ಮತ್ತೊಂದೆಡೆ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಕಾಂಗ್ರೆಸ್ 70 ವರ್ಷಗಳಲ್ಲಿ ಏನು ಮಾಡಿದೆ ಎಂದು ಮೋದಿ ಸದಾ ಪ್ರಶ್ನಿಸುತ್ತಿರುತ್ತಾರೆ. ಕಾಂಗ್ರೆಸ್ 70 ವರ್ಷಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ಬೆಲೆ ಏರಿಕೆಯನ್ನಂತೂ ಮಾಡಿರಲಿಲ್ಲ ಎಂದು ಹೇಳಲು ಬಯಸುತ್ತೇನೆ' ಎಂದು ರಾಹುಲ್ ತಿರುಗೇಟು ನೀಡಿದ್ದಾರೆ.
'ಇಬ್ಬರ ನಿಯಂತ್ರಣದಲ್ಲಿ ಮೋದಿ'
ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇಶದ ಇಬ್ಬರು ದೊಡ್ಡ ಉದ್ಯಮಿಗಳು ನಿಯಂತ್ರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ಆ ಇಬ್ಬರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಮೋದಿ ಅವರನ್ನು ಆ ಇಬ್ಬರು ನಿಯಂತ್ರಿಸುತ್ತಿದ್ದಾರೆ. ಆ ಇಬ್ಬರ ಬೆಂಬಲವಿಲ್ಲದೆ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಒಂದು ಕ್ಷಣವೂ ಉಳಿಯುವುದಿಲ್ಲ. ಹೀಗಾಗಿ ಮೋದಿ ಅವರು ಆ ಉದ್ಯಮಿಗಳಿಗಾಗಿ ದಿನದ 24 ಗಂಟೆಯೂ ದುಡಿಯುತ್ತಿದ್ದಾರೆ' ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
ದೇಶದ ಎಲ್ಲಾ ಸುದ್ದಿವಾಹಿನಿಗಳೂ ಈ ಇಬ್ಬರು ಉದ್ಯಮಿಗಳ ತೆಕ್ಕೆಯಲ್ಲಿವೆ. ಹೀಗಾಗಿ ಯಾವ ಸುದ್ದಿವಾಹಿನಿಯೂ ಈ ಸತ್ಯವನ್ನು ತೋರಿಸುವುದಿಲ್ಲ. ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಸರ್ಕಾರವು ವಿರೋಧ ಪಕ್ಷಗಳಿಗೆ ಅವಕಾಶ ಮಾಡಿಕೊಡುತ್ತಿಲ್ಲ. ಜತೆಗೆ ಮಾಧ್ಯಮಗಳೂ ನಮ್ಮ ಮಾತಿಗೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ನಾವು ಜನರ ಮಧ್ಯೆ ಬರಬೇಕಾಗಿದೆ ಎಂದು ಎಂದಿದ್ದಾರೆ.
ಜನರಿಗೆ ಈ ಸತ್ಯಗಳನ್ನು ಅರ್ಥಮಾಡಿಸಲು ಕಾಂಗ್ರೆಸ್ ಮತ್ತು ಉಳಿದ ಎಲ್ಲಾ ವಿರೋಧ ಪಕ್ಷಗಳಿಗೆ ಉಳಿದಿರುವ ಏಕೈಕ ಮಾರ್ಗವಿದು ಎಂದು ಅವರು ಹೇಳಿದ್ದಾರೆ.
ಕುಟುಂಬ ರಕ್ಷಣೆ ಉದ್ದೇಶ: ಬಿಜೆಪಿ
ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆ ವಹಿಸಿಕೊಳ್ಳಲು ಯಾರೂ ಮುಂದೆ ಬರು ತ್ತಿಲ್ಲ. ಹಾಗಾಗಿ, ರಾಹುಲ್ ಗಾಂಧಿ ಅವರನ್ನೇ ನಾಲ್ಕನೇ ಬಾರಿಗೆ ಮುನ್ನೆಲೆಗೆ ತರುವುದಕ್ಕಾಗಿ ರ‍್ಯಾಲಿ ನಡೆಸಲಾಗಿದೆ ಎಂದು ಬಿಜೆಪಿ ಹೇಳಿದೆ.
ರಾಮಲೀಲಾ ಮೈದಾನದಲ್ಲಿ ನಡೆದ ಸಮಾವೇಶದ ಮುಖ್ಯ ಉದ್ದೇಶವೇ ಗಾಂಧಿ-ನೆಹರೂ ಕುಟುಂಬವನ್ನು ರಕ್ಷಿಸುವುದಾಗಿದೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಅಲ್ಲ. ರಾಹುಲ್ ಅವರನ್ನು ಹಲವು ಬಾರಿ ಮುನ್ನೆಲೆಗೆ ತರಲಾಗಿದೆ. ಈಗಿನದ್ದು ನಾಲ್ಕನೇ ಯತ್ನ ಎಂದು ಬಿಜೆಪಿ ವಕ್ತಾರ ರಾಜ್ಯವರ್ಧನ ಸಿಂಗ್ ರಾಥೋಡ್ ಹೇಳಿದ್ದಾರೆ.
2014ರ ನಂತರ ನಡೆದ ಚುನಾವಣೆಗಳಲ್ಲಿ ಶೇ 90ರಷ್ಟನ್ನು ಕಾಂಗ್ರೆಸ್ ಸೋತಿದೆ ಎಂದು ಅವರು ಹೇಳಿದ್ದಾರೆ.