ನವದೆಹಲಿ: '2025ರ ವೇಳೆಗೆ ದೇಶದಿಂದ ಕ್ಷಯರೋಗವನ್ನು ನಿರ್ಮೂಲನೆ ಮಾಡಲು ಎಲ್ಲರೂ ಸಮರೋಪಾದಿಯಲ್ಲಿ ಸಾಂಘಿಕ ಪ್ರಯತ್ನ ನಡೆಸಬೇಕು' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶುಕ್ರವಾರ ಕರೆ ನೀಡಿದ್ದಾರೆ.
'ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನ'ಕ್ಕೆ ವರ್ಚುವಲ್ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, 'ನಿ- ಕ್ಷಯ್ 2.0' ಪೋರ್ಟಲ್ ಅಡಿಯಲ್ಲಿ ಸರ್ಕಾರವು ಕ್ಷಯರೋಗಿಗಳಿಗೆ ಸಮುದಾಯದ ಬೆಂಬಲವನ್ನು ನೀಡುವ ಕ್ರಮವನ್ನು ಶ್ಲಾಘಿಸಿದರು.
ಸರ್ಕಾರ ರೂಪಿಸಿರುವ ಪೋರ್ಟಲ್ ಅಡಿಯಲ್ಲಿ ಒಬ್ಬ ವ್ಯಕ್ತಿ, ಚುನಾಯಿತಿ ಪ್ರತಿನಿಧಿ ಇಲ್ಲವೇ ಸಂಘ-ಸಂಸ್ಥೆಗಳು ದತ್ತು ಪಡೆದು ಆರೈಕೆ ಮಾಡಬಹುದಾಗಿದೆ. ಈ ಅಭಿಯಾನವನ್ನು ಜನಾಂದೋಲನವನ್ನಾಗಿ ಮಾಡಲು ಎಲ್ಲರೂ ಪ್ರಯತ್ನಿಸಬೇಕು' ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರು, 'ಪ್ರಧಾನ ಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನವು ಪ್ರಧಾನಿ ನರೇಂದ್ರ ಮೋದಿ ಅವರ ನಾಗರಿಕ ಕೇಂದ್ರಿತ ನೀತಿಗಳ ವಿಸ್ತರಣೆಯಾಗಿದೆ' ಎಂದು ಹೇಳಿದರು.