HEALTH TIPS

ಅಮೆರಿಕದಲ್ಲಿ ಕ್ರಿಶ್ಚಿಯನ್ನರೇ ಅಲ್ಪಸಂಖ್ಯಾತರಾಗುವರೆ?!

 

                ಅಮೆರಿಕದಲ್ಲಿ ಸದ್ಯ ಕ್ರಿಶ್ಚಿಯನ್ನರು ಬಹುಸಂಖ್ಯಾತರಾಗಿದ್ದು, ರಾಜಕೀಯ ಹಾಗೂ ಸಾಮಾಜಿಕ ಆಗುಹೋಗುಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಆದರೆ, 2070ರ ಹೊತ್ತಿಗೆ ಈ ದೇಶದಲ್ಲಿ ಈ ಸಮುದಾಯದವರ ಸಂಖ್ಯೆ ಆರ್ಧದಷ್ಟು ಕುಸಿಯಲಿದೆ! ಇನ್ನೊಂದೆಡೆ, ಯಾವ ಧರ್ಮಕ್ಕೂ ಸೇರದವರ ಸಂಖ್ಯೆ ಹೆಚ್ಚುತ್ತಿದೆ.

                    ಈ ಕುರಿತ ಅಧ್ಯಯನ ವರದಿಯನ್ನು ಅಮೆರಿಕದ ವಾಷಿಂಗ್ಟನ್ ಡಿಸಿಯ 'ಪ್ಯೂ ಸಂಶೋಧನಾ ಕೇಂದ್ರ'ವು ಈಚೆಗೆ ಪ್ರಕಟಿಸಿದೆ. 1990ರ ದಶಕದಲ್ಲಿ ಅಮೆರಿಕದ ಒಟ್ಟಾರೆ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಶೇ. 90ರಷ್ಟು ಇತ್ತು. 2007ನೇ ಇಸ್ವಿಯ ಹೊತ್ತಿಗೆ ಇದು ಶೇ. 78ಕ್ಕೆ ಕುಸಿತ ಕಂಡಿತು. ಆದರೆ, 2020ರ ವೇಳೆಗೆ ಮತ್ತಷ್ಟು ಇಳಿಕೆ ಕಂಡಿದೆ. 2020ರಲ್ಲಿ ಅಮೆರಿಕದ ಒಟ್ಟಾರೆ ಜನಸಂಖ್ಯೆಯಲ್ಲಿ ಮಕ್ಕಳು ಸೇರಿದಂತೆ ಶೇ. 64ರಷ್ಟು ಕ್ರಿಶ್ಚಿಯನ್ನರಿದ್ದಾರೆ. 2070ರ ಹೊತ್ತಿಗೆ ಈ ಪ್ರಮಾಣ ಶೇ. 35ಕ್ಕೆ ಕುಸಿಯಬಹುದಾಗಿದೆ ಎಂದು ಪ್ರಸ್ತುತ ಪ್ರವೃತ್ತಿ ಹಾಗೂ ಬೆಳವಣಿಗೆಗಳನ್ನು ಆಧರಿಸಿ ಈ ಸಂಸ್ಥೆಯು ಲೆಕ್ಕಾಚಾರ ಮುಂದಿಟ್ಟಿದೆ. ಈ ಪ್ರವೃತ್ತಿಗೆ ನಿರ್ದಿಷ್ಟ ಕಾರಣಗಳನ್ನು ಈ ವರದಿಯು ಬೊಟ್ಟುಮಾಡಿಲ್ಲ.

                   ಸ್ಥಿರ ಬದಲಾವಣೆ: ಕ್ರಿಶ್ಚಿಯನ್ ಧರ್ಮದ ಒಳಗೆ ಮತ್ತು ಹೊರಗಿನ ಚಲನೆಯ ದರವು ಇತ್ತೀಚಿನ ದಿನಗಳಲ್ಲಿ ಸ್ಥಿರವಾಗಿದೆ. ಅಂದರೆ, ಪ್ರತಿ ಹೊಸ ಪೀಳಿಗೆಯಲ್ಲಿ ಶೇ. 31ರಷ್ಟು ಕ್ರಿಶ್ಚಿಯನ್ನರು ತಮ್ಮ 30ನೇ ವಯಸ್ಸಿಗೆ ಮುಂಚಿತವಾಗಿಯೇ ಧಾರ್ವಿುಕವಾಗಿ ಸಂಬಂಧ ಹೊಂದಿಲ್ಲದವರಾಗುತ್ತಾರೆ. ಅಂದರೆ, ನಾಸ್ತಿಕ ಇಲ್ಲವೇ ಆಜ್ಞೇಯತಾವಾದಿ ಎಂದು ಘೋಷಿಸಿಕೊಳ್ಳುತ್ತಾರೆ. ಇದೇ ವೇಳೆ ಧಾರ್ವಿುಕವಾಗಿ ಸಂಬಂಧವಿಲ್ಲದ ಶೇ. 21ರಷ್ಟು ಜನರು ಕ್ರಿಶ್ಚಿಯನ್ ಧರ್ಮವನ್ನು ಅಪ್ಪಿಕೊಳ್ಳುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿದೆ.

                     ಧಾರ್ವಿುಕ ತಟಸ್ಥರು: ಧಾರ್ವಿುಕವಾಗಿ ತಟಸ್ಥವಾಗಿ ರುವವರಲ್ಲಿ ಎರಡು ರೀತಿಯ ಜನರನ್ನು ಗುರುತಿಸಬಹುದಾಗಿದೆ. ಒಂದು ನಾಸ್ತಿಕ ಹಾಗೂ ಇನ್ನೊಂದು ಆಜ್ಞೇಯತಾವಾದಿ.ದೇವರ ಅಸ್ತಿತ್ವ ಅಥವಾ ಭೌತಿಕ ವಿದ್ಯಮಾನಗಳನ್ನು ಮೀರಿದ ಯಾವುದನ್ನೂ ತಿಳಿದಿಲ್ಲ ಅಥವಾ ತಿಳಿಯಲಾಗುವುದಿಲ್ಲ ಎಂದು ನಂಬುವ ವ್ಯಕ್ತಿ; ದೇವರಲ್ಲಿ ನಂಬಿಕೆ ಅಥವಾ ಅಪನಂಬಿಕೆಯನ್ನು ವ್ಯಕ್ತಪಡಿಸದ ವ್ಯಕ್ತಿ ಆಜ್ಞೇಯತಾವಾದಿ. ದೇವರ ಅಸ್ತಿತ್ವದಲ್ಲಿ ನಂಬಿಕೆಯೇ ಇಲ್ಲದಿರುವವರನ್ನು ನಾಸ್ತಿಕ ಎನ್ನಲಾಗುತ್ತದೆ.

                     ಧರ್ಮದ ಭವಿಷ್ಯವೇನು?: 1990ರ ದಶಕದಿಂದಲೂ ಸಾಕಷ್ಟು ಸಂಖ್ಯೆಯ ಅಮೆರಿಕನ್ನರು ಕ್ರಿಶ್ಚಿಯನ್ ಧರ್ಮವನ್ನು ತೊರೆಯುತ್ತಿದ್ದಾರೆ. ಹಾಗಂತ ಅವರು ಬೇರಾವುದೇ ಧರ್ಮಕ್ಕೆ ಮತಾಂತರ ಹೊಂದುತ್ತಿಲ್ಲ. ಕ್ರಿಶ್ಚಿಯನ್ ಧರ್ಮ ತೊರೆದು ತಮ್ಮ ಧಾರ್ವಿುಕ ಗುರುತನ್ನು ನಾಸ್ತಿಕ ಇಲ್ಲವೇ ಆಜ್ಞೇಯತಾವಾದಿ ಎಂದು ಹೇಳಿಕೊಳ್ಳುವ ಅಮೆರಿಕದ ವಯಸ್ಕರ ಸಂಖ್ಯೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಯಾವುದೇ ಧರ್ಮಕ್ಕೆ ಸೇರದವರ ಸಂಖ್ಯೆ 2007ರಲ್ಲಿ ಶೇ. 16ರಷ್ಟಿತ್ತು. 2020ರ ಹೊತ್ತಿಗೆ ಇದು ಶೇ. 30ಕ್ಕೆ ಹೆಚ್ಚಳವಾಗಿದೆ ಎಂದು ಅಧ್ಯಯನ ವರದಿ ವಿವರಿಸಿದೆ. ಈ ಪ್ರವೃತ್ತಿಯು ಅಮೆರಿಕದ ಧಾರ್ವಿುಕ ಸ್ಥಿತಿಗತಿಯನ್ನು ಮರುರೂಪಿಸುತ್ತಿದೆ. ಹೀಗಾಗಿ ಅಮೆರಿಕದಲ್ಲಿ ಧರ್ಮದ ಭವಿಷ್ಯವು 50 ವರ್ಷಗಳ ನಂತರ ಹೇಗಿರಬಹುದು ಎಂದು ಜನರು ಜಿಜ್ಞಾಸೆಯಲ್ಲಿ ತೊಡಗುವಂತಾಗಿದೆ.

                  ಪ್ಯೂ ಸಂಶೋಧನಾ ಕೇಂದ್ರದ ಅಂದಾಜಿನ ಪ್ರಕಾರ, 2020 ರಲ್ಲಿ ಅಮೆರಿಕದಲ್ಲಿ ಶೇ. 64 ಕ್ರಿಶ್ಚಿಯನ್ನರಿದ್ದಾರೆ. ಇತರ ಎಲ್ಲ ಧರ್ಮಗಳ ಅನುಯಾಯಿಗಳು (ಯಹೂದಿಗಳು, ಮುಸ್ಲಿಮರು, ಹಿಂದೂಗಳು, ಬೌದ್ಧರು) ಅಂದಾಜು ಶೇ. 6ರಷ್ಟು ಇದ್ದಾರೆ. ಆದರೆ, ಧಾರ್ವಿುಕವಾಗಿ ಸಂಬಂಧವಿಲ್ಲದ ಜನರ (ರಿಲಿಜಿಯಸ್ ನನ್ಸ್) ಸಂಖ್ಯೆ ಶೇ.30ರಷ್ಟಿದೆ. ಈ ಧಾರ್ವಿುಕ ಬದಲಾವಣೆಯು ಇದೇ ದರ ಹಾಗೂ ವೇಗದಲ್ಲಿ ಮುಂದುವರಿಯಬಹುದು ಎಂಬ ಆಧಾರದ ಮೇಲೆ 2070ರಲ್ಲಿ ಒಟ್ಟಾರೆ ಅಮೆರಿಕದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಶೇ. 35 ಆಗಲಿದೆ ಎಂದು 'ಅಮೆರಿಕದಲ್ಲಿ ಭವಿಷ್ಯದಲ್ಲಿ ಧರ್ಮದ ಮಾದರಿ' ಎಂಬ ಅಧ್ಯಯನ ವರದಿಯಲ್ಲಿ ಪ್ಯೂ ಸಂಶೋಧನಾ ಕೇಂದ್ರ ಹೇಳಿದೆ. ಇದು ಕೇವಲ ಸಾಧ್ಯತೆಯಲ್ಲ; ಮುಂದೆ ಏನಾಗಬಹುದು ಎಂಬುದರ ಮುನ್ಸೂಚನೆ ಆಗಿದೆ ಎಂದು ಅದು ಹೇಳಿದೆ.

                     ಪ್ಯೂ ರಿಸರ್ಚ್ ಸೆಂಟರ್: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಪ್ಯೂ ರಿಸರ್ಚ್ ಸೆಂಟರ್ ಸ್ವತಂತ್ರ ಅಧ್ಯಯನ ಸಂಸ್ಥೆಯಾಗಿದ್ದು, ಲಾಭೋದ್ದೇಶವಿಲ್ಲದೆ ಕಾರ್ಯನಿರ್ವಹಿಸುವುದಾಗಿ ಹೇಳಿಕೊಳ್ಳುತ್ತದೆ. 2004ರಲ್ಲಿ ಸ್ಥಾಪನೆಯಾಗಿರುವ ಇದು ಪ್ಯೂ ಚಾರಿಟೆಬಲ್ ಟ್ರಸ್ಟ್​ನ ಅಂಗಸಂಸ್ಥೆಯಾಗಿದೆ. ಇದು ತನ್ನನ್ನು 'ವಾಸ್ತವ ಚಿಂತಕ' ಎಂದೇ ಬಿಂಬಿಸಿಕೊಳ್ಳುತ್ತದೆ.

                   ಭಾರತದ ಸ್ಥಿತಿಗತಿ: ಪ್ಯೂ ಸಂಶೋಧನಾ ಕೇಂದ್ರವು ಭಾರತದಲ್ಲಿನ ಧಾರ್ವಿುಕ ಸ್ಥಿತಿಗತಿ ಕುರಿತಂತೆ 2021ರಲ್ಲಿ ಅಧ್ಯಯನ ವರದಿ ಬಿಡುಗಡೆ ಮಾಡಿತ್ತು. 17 ಭಾಷೆಗಳಲ್ಲಿ ಸುಮಾರು 30 ಸಾವಿರ ಜನರನ್ನು ಮಾತನಾಡಿಸಿ, ಈ ವರದಿ ಪ್ರಕಟಿಸಿತ್ತು. ಇದರ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳು ಶೇ. 80ರಷ್ಟಿದ್ದರೆ, ಮುಸ್ಲಿಮರು ಶೇ. 14ರಷ್ಟಿದ್ದಾರೆ. ಧರ್ಮದ ವಿಷಯಕ್ಕೆ ಬಂದಾಗ, ಎಲ್ಲ ಧರ್ಮಕ್ಕೆ ಸೇರಿದ ಬಹುತೇಕ ಭಾರತೀಯರು ಧಾರ್ವಿುಕ ಸಹಿಷ್ಣುತೆ ಮತ್ತು ಧಾರ್ವಿುಕ ಪ್ರತ್ಯೇಕತೆಯನ್ನು ಬೆಂಬಲಿಸುತ್ತಾರೆ. ಇತರ ಧರ್ಮಗಳಿಗೆ ಗೌರವ ಕೊಡುವುದು ತಮ್ಮ ಅಸ್ಮಿತೆಯ ಪ್ರಮುಖ ಭಾಗವಾಗಿದೆ ಹಾಗೂ ನಿಜವಾದ ಭಾರತೀಯನ ಕರ್ತವ್ಯವಾಗಿದೆ ಎಂದು ಶೇ. 84 ಭಾರತೀಯರು ಅಭಿಪ್ರಾಯಡುತ್ತಾರೆ ಎಂದು ಅಧ್ಯಯನ ವರದಿ ತಿಳಿಸಿತ್ತು. ಇದೇ ವೇಳೆ, ಇವರಲ್ಲಿ ಗಣನೀಯ ಸಂಖ್ಯೆಯ ಜನರು ಇನ್ನೊಂದು ಧರ್ಮಕ್ಕೆ ಸೇರಿದ ನೆರೆಹೊರೆಯವರನ್ನು ಬಯಸುವುದಿಲ್ಲ ಹಾಗೂ ಅಂತರ್ಧರ್ವಿುಯ ಮತ್ತು ಅಂತರ್ಜಾತೀಯ ವಿವಾಹಗಳನ್ನು ಬೆಂಬಲಿಸುವುದಿಲ್ಲ. ಅವರು ತಮ್ಮ ಧಾರ್ವಿುಕ ಸಮುದಾಯದರಲ್ಲಿಯೇ ಸ್ನೇಹಿತರನ್ನು ಹೊಂದಲು ಆದ್ಯತೆ ನೀಡುತ್ತಾರೆ ಎಂದೂ ಅಧ್ಯಯನ ವರದಿ ಹೇಳಿತ್ತು. 'ಇದು ಭಾರತೀಯ ಸಮಾಜದ ಬಹುತ್ವದ ವಿಶಿಷ್ಟತೆಯನ್ನು ಸೂಚಿಸುತ್ತದೆ. ಇದು ಒಂದೇ ತಟ್ಟೆಯಲ್ಲಿ ಬಡಿಸುವ ಪ್ರತ್ಯೇಕ ಭಕ್ಷ್ಯಗಳ ಆಯ್ಕೆಯನ್ನು ಒಳಗೊಂಡಿರುವ ಭಾರತೀಯ ಊಟ ಎಂಬಂತಿದೆ' ಎಂದು ಈ ಅಧ್ಯಯನದ ಲೇಖಕರಲ್ಲಿ ಒಬ್ಬರಾದ ನೇಹಾ ಸಹಗಲ್ ಅಭಿಪ್ರಾಯಪಟ್ಟಿದ್ದರು.


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries