ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪುತ್ರ ಹಾಗೂ ಲೋಕಸಭಾ ಸದಸ್ಯ ಶ್ರೀಕಾಂತ್ ಶಿಂಧೆ ಸಿಎಂ ಕುರ್ಚಿಯಲ್ಲಿ ಕುಳಿತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
"ಇದು ನಮ್ಮ ಮನೆಯಲ್ಲಿ ತೆಗೆದ ಚಿತ್ರ; ತಂದೆಗೆ ಕಚೇರಿಯಲ್ಲಿ ನೀಡಿದ ಅಧಿಕೃತ ಸಿಎಂ ಕುರ್ಚಿ ಮೇಲೆ ನಾನು ಕುಳಿತಿಲ್ಲ" ಎಂದು ಶ್ರೀಕಾಂತ್ ಸಮುಜಾಯಿಷಿ ನೀಡಿದ್ದಾರೆ. ಇದು ಮುಖ್ಯಮಂತ್ರಿಯ ಅಧಿಕೃತ ನಿವಾಸವೂ ಅಲ್ಲ. "ಥಾಣೆಯಲ್ಲಿರುವ ಖಾಸಗಿ ನಿವಾಸ ಹಾಗೂ ಕಚೇರಿ ಇದು" ಎಂದು ಸ್ಪಷ್ಟನೆ ನೀಡಿದ್ದಾರೆ.
ಎನ್‍ಸಿಪಿ ವಕ್ತಾರ ರವಿಕಾಂತ್ ವಾರ್ಪೆ ಟ್ವೀಟ್ ಮಾಡಿದ ಚಿತ್ರದಲ್ಲಿ ಶ್ರೀಕಾಂತ್ ಅವರು ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರ ಫೋಟೊದ ಮುಂದೆ ಕುಳಿತಿದ್ದಾರೆ. ಫೋಟೊ ಹಿಂಭಾಗದಲ್ಲಿ "ಮಹಾರಾಷ್ಟ್ರ ಸರ್ಕಾರ- ಮುಖ್ಯಮಂತ್ರಿ" ಎಂಬ ಫಲಕ ಕಾಣುತ್ತಿದೆ. ಶ್ರೀಕಾಂತ್ ಶಿಂಧೆಯವರನ್ನು ಸೂಪರ್ ಸಿಎಂ ಎಂದು ಕರೆದಿರುವ ಎನ್‍ಸಿಪಿ ನಾಯಕ, "ಇದು ಯಾವ ಬಗೆಯ ರಾಜಧರ್ಮ?" ಎಂದು ಪ್ರಶ್ನಿಸಿದ್ದಾರೆ.
ಶಿವಸೇನೆ ನಾಯಕಿ ಪ್ರಿಯಾಂಕಾ ಚತುರ್ವೇದಿ ಈ ಬಗ್ಗೆ ಟ್ವೀಟ್ ಮಾಡಿ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಗ್ಗೆ ಅನುಕಂಪವಿದೆ ಎಂದು ವ್ಯಂಗ್ಯವಾಡಿದ್ದಾರೆ.
"ಆದಿತ್ಯ ಠಾಕ್ರೆ ಸಚಿವರಾಗಿದ್ದಾಗ ಅವರು ಸಿಎಂ ವ್ಯವಹಾರಗಳಲ್ಲಿ ಮೂಗು ತೂರಿಸುತ್ತಾರೆ ಎನ್ನುವುದು ಬಿಜೆಪಿಯ ಆರೋಪವಾಗಿತ್ತು. ಆದರೆ ಏಕನಾಥ ಶಿಂಧೆಯವರ ಪುತ್ರ ಸಚಿವರೂ ಅಲ್ಲ; ಶಾಸಕರೂ ಅಲ್ಲ" ಎಂದು ಕಾಲೆಳೆದಿದ್ದಾರೆ. ಈ ಬಗ್ಗೆ hindustantimes.com ವರದಿ ಮಾಡಿದೆ.