ಫಾತೆಹಬಾದ್ : 'ಶಿರೋಮಣಿ ಅಕಾಲಿ ದಳ (ಎಸ್‌ಎಡಿ), ಶಿವಸೇನಾ ಮತ್ತು ಜೆಡಿಯು ಪಕ್ಷಗಳು ಮೈತ್ರಿಕೂಟವನ್ನು ಮೊದಲು ರಚಿಸಿದ್ದು. ಹಾಗಾಗಿ ಈ ಮೂರು ಪಕ್ಷಗಳೇ ನಿಜವಾದ ಎನ್‌ಡಿಎ' ಎಂದು ಎಸ್‌ಡಿಎ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ಅವರು ಹೇಳಿದರು.
ಇಂಡಿಯನ್ ನ್ಯಾಷನಲ್ ಲೋಕದಳ(ಐಎನ್‌ಎಲ್‌ಡಿ) ಆಯೋಜಿಸಿದ್ದ ಬೃಹತ್ ರ‍್ಯಾಲಿಯಲ್ಲಿ ಅವರು ಈ ಮಾತುಗಳನ್ನಾಡಿದರು. 'ಎನ್‌ಡಿಎ ಮೈತ್ರಿಕೂಟ ರಚಿಸಿದ್ದು ನಾವು. ಆ ಸಮಯದಲ್ಲಿ ಬಿಜೆಪಿ ಸಣ್ಣ ಪಕ್ಷವಾಗಿದ್ದರಿಂದ ನಾವು ಅದರ ಜೊತೆಯಾಗಿ ನಿಂತೆವು. ಆದರೆ ಈಗ ರೈತರು, ಕೂಲಿ ಕಾರ್ಮಿಕರಿಗಾಗಿ ಮೈತ್ರಿಕೂಟ ರಚಿಸುವ ಸಮಯ ಬಂದಿದೆ' ಎಂದರು.
ಇದೇ ವೇಳೆ ಆಮ್ ಆದ್ಮಿ ಪಕ್ಷದ ವಿರುದ್ಧ ಹರಿಹಾಯ್ದ ಅವರು, ಅಂತಹ ಪಕ್ಷಗಳು ಇಡೀ ರಾಜ್ಯದ ವ್ಯವಸ್ಥೆಯನ್ನು ಹಾಳುಮಾಡುತ್ತವೆ ಎಂದರು.
ಸಂವಿಧಾನ ಉಳಿಸಲು ಎನ್‌ಡಿಎ ತೊರೆದ ಪಕ್ಷಗಳು: ತೇಜಸ್ವಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಸಲುವಾಗಿ ಜೆಡಿಯು, ಎಸ್‌ಎಡಿ ಮತ್ತು ಶಿವಸೇನಾ ಪಕ್ಷಗಳು ಎನ್‌ಡಿಎ ಮೈತ್ರಿಕೂಟವನ್ನು ತೊರೆದವು. ಎನ್‌ಡಿಎ ಈಗ ಎಲ್ಲಿದೆ? ಎಂದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಐಎನ್‌ಎಲ್‌ಡಿ ರ‍್ಯಾಲಿಯಲ್ಲಿ ಕೇಳಿದರು.
ಬಿಜೆಪಿ ಕೇವಲ ಸುಳ್ಳು ಭರವಸೆಗಳನ್ನು ನೀಡುತ್ತದೆ ಎಂದು ಆರೋಪಿಸಿದ ಅವರು ಅದನ್ನು ದೊಡ್ಡ ಸುಳ್ಳುಗಾರ ಪಕ್ಷ ಎಂದು ಕರೆದರು. ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಬಿಹಾರ ಸರ್ಕಾರವು ಕೆಲಸ ಆರಂಭಿಸಿದೆ. ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಭರವಸೆಯನ್ನು ಈಡೇರಿಸಿಲ್ಲ ಎಂದರು.