ನವದೆಹಲಿ: ಅಬಕಾರಿ ನೀತಿ ಅನುಷ್ಠಾನದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿ ಸೇರಿ ಆರು ರಾಜ್ಯಗಳ ಪ್ರಮುಖ ನಗರಗಳಲ್ಲಿ ಮಂಗಳವಾರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳ ನಗರಗಳಲ್ಲಿ ದಾಳಿ ನಡೆದಿದ್ದು, ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ 'ಎಎನ್‌ಐ' ವರದಿ ಮಾಡಿದೆ.
ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಿಸಿದ ರಹಸ್ಯ ಕಾರ್ಯಾಚರಣೆಯ ವಿಡಿಯೊವೊಂದನ್ನು ಸೋಮವಾರ ಬಿಡುಗಡೆ ಮಾಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಬ್ಯಾಂಕ್ ಲಾಕರ್ ಅನ್ನು ಸಿಬಿಐ ಅಧಿಕಾರಿಗಳು ಇತ್ತೀಚೆಗೆ ಪರಿಶೀಲನೆಗೆ ಒಳಪಡಿಸಿದ್ದರು. ಬಳಿಕ ಪ್ರತಿಕ್ರಿಯಿಸಿದ್ದ ಸಿಸೋಡಿಯಾ, ಬ್ಯಾಂಕ್ ಲಾಕರ್ ಅನ್ನು ಪರಿಶೀಲಿಸಿದ ಬಳಿಕ ಸಿಬಿಐ ನನಗೆ ಕ್ಲೀನ್‌ಚಿಟ್ ನೀಡಿದೆ ಎಂದು ಹೇಳಿದ್ದರು.