ನವದೆಹಲಿ: ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೇರಿದಂತೆ ಮುಸ್ಲಿಂ ಸಮುದಾಯದ ಚಿಂತಕರ ಗುಂಪು ಇತ್ತೀಚೆಗೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಬಲಪಡಿಸುವ ಯೋಜನೆಯನ್ನು ರೂಪಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಚೇರಿಯಾದ ಉದಾಸಿನ್ ಆಶ್ರಮದಲ್ಲಿ ಇತ್ತೀಚೆಗೆ ನಡೆದ ಗೌಪ್ಯ ಸಭೆಯಲ್ಲಿ ಅಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಮೀರುದ್ದೀನ್ ಶಾ, ಮಾಜಿ ಸಂಸದ ಶಾಹಿದ್ ಸಿದ್ದಿಕಿ ಸೇರಿ ಹಲವರು ಹಾಜರಿದ್ದರು ಎಂದು ಹೇಳಲಾಗಿದೆ.
ಕೋಮು ಸೌಹಾರ್ದತೆಯನ್ನು ಬಲಪಡಿಸುವುದು ಮತ್ತು ಸಮುದಾಯದೊಳಗಿನ ಸಂಬಂಧಗಳನ್ನು ಸುಧಾರಿಸುವ ಕುರಿತು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವ್ಯಾಪಕ ಚರ್ಚೆಗಳು ನಡೆದವು ಎಂದು ಮೂಲಗಳು ತಿಳಿಸಿವೆ.
ಕೋಮು ಸೌಹಾರ್ದತೆ ಮತ್ತು ಸಮುದಾಯಗಳ ನಡುವೆ ಸಾಮರಸ್ಯವನ್ನು ಬಲಪಡಿಸದೇ ದೇಶವು ಪ್ರಗತಿ ಸಾಧಿಸಲು ಸಾಧ್ಯವಿಲ್ಲ ಎಂದು ಭಾಗವತ್ ಮತ್ತು ಚಿಂತಕರ ಗುಂಪು ಒಪ್ಪಿಕೊಂಡಿದೆ ಎಂದು ಸಭೆಯಲ್ಲಿದ್ದವರ ಮಾಹಿತಿ ಉಲ್ಲೇಖಿಸಿ ಪಿಟಿಐ ವರದಿ ಪ್ರಕಟಿಸಿದೆ.
ಎರಡೂ ಕಡೆಯವರು ಕೋಮು ಸೌಹಾರ್ದತೆಯ ಅಗತ್ಯವನ್ನು ಪ್ರತಿಪಾದಿಸಿದರು. ಸಮುದಾಯಗಳ ನಡುವಿನ ಭಿನ್ನಾಭಿಪ್ರಾಯಗಳು ಮತ್ತು ತಪ್ಪುಗ್ರಹಿಕೆಯನ್ನು ಹೋಗಲಾಡಿಸಲು ಈ ಉಪಕ್ರಮವನ್ನು ಮುಂದುವರಿಸಲು ಯೋಜನೆಯನ್ನು ರೂಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದೇಶದ ಒಟ್ಟಾರೆ ಹಿತಕ್ಕಾಗಿ ಗಾಂಧಿವಾದಿ ವಿಧಾನವನ್ನು ಅನುಸರಿಸುವುದರ ಬಗ್ಗೆ ಚರ್ಚೆಗಳು ನಡೆದವು ಎನ್ನಲಾಗಿದೆ.
ಭಾಗವತ್ ಅವರು ಇಲ್ಲಿನ ಆರ್‌ಎಸ್‌ಎಸ್ ಕಚೇರಿಯಲ್ಲಿ ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮೌಲಾನಾ ಸೈಯದ್ ಅರ್ಷದ್ ಮದನಿ ಅವರನ್ನು 2019ರ ಸೆಪ್ಟೆಂಬರ್‌ನಲ್ಲಿ ಭೇಟಿ ಮಾಡಿದ್ದರು. ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಬಲಪಡಿಸುವುದು ಮತ್ತು ಗುಂಪು ಹತ್ಯೆಯ ಘಟನೆಗಳು ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಆಗೆ ಚರ್ಚೆಗಳಾಗಿದ್ದವು.
ಸಂಘದ ಹಿರಿಯ ಪದಾಧಿಕಾರಿ ಹಾಗೂ ಬಿಜೆಪಿಯ ಮಾಜಿ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಸಭೆಯನ್ನು ಸಂಯೋಜನೆಗೊಳಿಸಿದ್ದರು ಎನ್ನಲಾಗಿದೆ.