ಮುಂಬೈ: ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಶುಕ್ರವಾರ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿಮಾಡಿದೆ.
ದಿಲೀಪ್ ಲುನಾವತ್ ಎಂಬುವವರ ಪುತ್ರಿ, ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಮೇಲೆ ಸಾವನ್ನಪ್ಪಿದ್ದರು. ಕೊರೊನಾ ವ್ಯಾಕ್ಸಿನ್ ತೆಗೆದುಕೊಂಡ ನಂತರ ಸೈಡ್ ಎಫೆಕ್ಟ್ಸ್ ಉಂಟಾಗಿ ಸಾವನ್ನಪ್ಪಿದ್ದಾಳೆ ಎಂದು ದಿಲೀಪ್ ಆರೋಪಿಸಿದ್ದರು. ಅಲ್ಲದೇ ಒಂದು ಸಾವಿರ ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಬಾಂಬೈ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇದರ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಭಾರತ ಮತ್ತು ಇತರ ತೃತೀಯ ಜಗತ್ತಿನ ದೇಶಗಳಿಗೆ 100 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಗಳ ತಯಾರಿಕೆ ಮತ್ತು ವಿತರಣೆಯ ಪ್ರಕ್ರಿಯೆಯನ್ನು ವೇಗಗೊಳಿಸಲು, 2020 ರಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ ನೊಂದಿಗೆ ಪಾಲುದಾರಿಕೆಗೆ ಒಳಪಟ್ಟಿತ್ತು.
ಭಾರತದ ಕೇಂದ್ರ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಡ್ರಗ್ ಕಂಟ್ರೋಲರ್ ಜನರಲ್ ಡಾ ವಿಜಿ ಸೋಮಾನಿ ಮತ್ತು ಎಐಐಎಂಎಸ್ ನಿರ್ದೇಶಕ ಡಾ ರಂದೀಪ್ ಗುಲೇರಿಯಾ ಅವರನ್ನು ಅರ್ಜಿಯ ಇತರ ಪ್ರತಿವಾದಿಗಳಾಗಿ ಮಾಡಲಾಗಿದೆ.