ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದಲ್ಲಿ ಗದ್ದೆಯಲ್ಲಿ ಬೆಳೆಗೆ ಕೀಟನಾಶಕ ಸಿಂಪಡಿಸಿದ ರೈತರೊಬ್ಬರು, ಬಳಿಕ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಕಚೂರ್‌ವಾಲಿ ಗ್ರಾಮದ ರಾಮ್‌ತೇಕ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ರೈತರನ್ನು ರಮೇಶ್ ಗುಲಾಬ್ ಚಾರ್ದೆ ಎಂದು ಗುರುತಿಸಲಾಗಿದೆ. ಭಾನುವಾರ ಬೆಳಗಿನ ಜಾವ ಅವರು ಗದ್ದೆಗೆ ತೆರಳಿ ಕೀಟನಾಶಕ ಸಿಂಪಡಣೆಯಲ್ಲಿ ತೊಡಗಿದ್ದರು. ಮಧ್ಯಾಹ್ನದ ವೇಳೆಗೆ ಅವರು ಕುಸಿದುಬಿದ್ದಿದ್ದರು.
ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ರೈತರಿಗೆ ನಾಲ್ಕು ಎಕರೆ ಕೃಷಿ ಭೂಮಿಯಿದ್ದು, ತಾಯಿ, ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ.
ರೈತನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಯ್ಯಲಾಗಿದ್ದು, ಕೀಟನಾಶಕದ ಮಾದರಿಯನ್ನು ಕೂಡ ಸಂಗ್ರಹಿಸಲಾಗಿದೆ, ರೈತನ ಸಾವಿನ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.