ಚೆನ್ನೈ: ಬೆಕ್ಕಿನ ಮರಿಗಳನ್ನು ಮಾರಾಟಕ್ಕಿಟ್ಟು ವ್ಯಕ್ತಿಯೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ! ಏಕೆಂದರೆ ಈತ ಬೆಕ್ಕನ್ನು ಹುಲಿಮರಿಯನ್ನಾಗಿ ಪರಿವರ್ತಿಸಿ ಅದನ್ನು ಮಾರಾಟಕ್ಕಿಟ್ಟಿದ್ದ!
ಬೆಕ್ಕಿಗೆ ಹುಲಿಮರಿಯ ಬಣ್ಣ ಬಳಿದು ಅದನ್ನು ಮಾರಾಟ ಮಾಡಲು ಹೋದ ಖತರ್ನಾಕ್ ಐಡಿಯಾ ಮಾಡಿದವನು ತಮಿಳುನಾಡಿನ ತಿರುವಣ್ಣಾಮಲೈ ಗ್ರಾಮದ ಅರ್ನಿ ನಿವಾಸಿ ಪಾರ್ಥಿಬನ್ (24).
ತನ್ನ ಬಳಿ ಇದ್ದ ಬೆಕ್ಕಿನ ಮರಿಗಳಿಗೆ ಬಣ್ಣ ಬಳಿದ ಈತ ಅದನ್ನು ಹುಲಿಮರಿಗಳಂತೆಯೇ ಕಾಣಿಸುವಂತೆ ಮಾಡಿದ್ದ.
ಮೂರು ತಿಂಗಳ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸ್ಆಯಪ್ನಲ್ಲಿ ಸ್ಟೇಟಸ್ ಹಾಕಿದ್ದ. ಅದನ್ನು ಪಕ್ಕದ ಆಂಧ್ರಪ್ರದೇಶಕ್ಕೆ ಮಾರಲು ಯತ್ನಿಸುತ್ತಿದ್ದ. ಪ್ರತಿ ಮರಿಗೆ 25 ಲಕ್ಷ ರೂಪಾಯಿ ಬೆಲೆ ನಿಗದಿ ಮಾಡಿದ್ದ. ಹುಲಿಮರಿಗಳು ಬೇಕೆಂದರೆ ತನಗೆ ಸಂಪರ್ಕಿಸುವಂತೆ ಆತ ಅದರಲ್ಲಿ ಹೇಳಿದ್ದ. ಖುದ್ದಾಗಿ ಬಂದು ಹುಲಿಮರಿಗಳನ್ನು ಖರೀದಿಸುವವರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್ಬೌಲ್ನಲ್ಲಿ ಹುಲಿ ಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ.
ಹುಲಿಮರಿಗಳನ್ನು ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈತನ ಮೇಲೆ ಕಣ್ಣು ಇಟ್ಟಿತ್ತು. ಇದು ತಿಳಿಯುತ್ತಲೇ ಪಾರ್ಥಿಬನ್ ತಲೆಮರೆಸಿಕೊಂಡಿದ್ದ. ನಂತರ ಅರಣ್ಯಾಧಿಕಾರಿಗಳು ಇವರ ಮನೆಯಲ್ಲಿ ಹುಡುಕಾಟ ನಡೆಸಿದ್ದರೂ ಹುಲಿ ಮರಿಗಳು ಮಾತ್ರ ಸಿಗಲಿಲ್ಲ. ನಂತರ ಸ್ಥಳೀಯ ಪೊಲೀಸರ ನೆರವಿನಿಂದ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ.
ಇದೇ ವ್ಯಕ್ತಿ ಈ ಹಿಂದೆ ನಕ್ಷತ್ರ ಆಮೆಗಳನ್ನು ಅಕ್ರಮವಾಗಿ ಮಾರಾಟ ಮಾಡಿರುವುದೂ ತಿಳಿದಿದೆ. ಸದ್ಯ ಈತ ಪೊಲೀಸರ ಅತಿಥಿ.