ಧರ್ಮಶಾಲಾ: ಪ್ರವಾಸಿ ತಾಣಗಳಲ್ಲಿ ಮತ್ತು ತಾರಾ ಹೋಟೆಲ್‍ಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ಕಡ್ಡಾಯವಾಗಿದ್ದು, ಇದಕ್ಕಾಗಿ ಕಾಯಂ ಧ್ವಜಸ್ತಂಭಗಳನ್ನು ನಿರ್ಮಿಸಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಜಿ.ಕಿಶಣ್ ರೆಡ್ಡಿ ಹೇಳಿದ್ದಾರೆ.
ಈ ಸ್ಥಳಗಳಲ್ಲಿ ಆಝಾದಿ ಕಾ ಅಮೃತ ಮಹೋತ್ಸವ್ ಬ್ರಾಂಡಿಂಗ್ ಅನ್ನು ಪ್ರಮುಖವಾಗಿ ಪ್ರದರ್ಶಿಸುವುದು ಕೂಡಾ ಕಡ್ಡಾಯ ಎಂದು ಅವರು ಸ್ಪಷ್ಟಪಡಿಸಿದರು.
ಧರ್ಮಶಾಲಾದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯ ಪ್ರವಾಸೋದ್ಯಮ ಸಚಿವರ ರಾಷ್ಟ್ರೀಯ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು.
"ಪ್ರವಾಸಿ ತಾಣಗಳು ಮತ್ತು ಹೋಟೆಲ್‍ಗಳ ಹೊರಗೆ ರಾಷ್ಟ್ರಧ್ವಜಾರೋಹಣ ಮಾಡುವುದಕ್ಕಿಂತ ಒಳ್ಳೆಯ ಪ್ರವಾಸೋದ್ಯಮ ಬ್ರಾಂಡಿಂಗ್ ಇರಲಾರದು. ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯಕ್ಕೂ ಈ ಬಗ್ಗೆ ಸೂಚನೆ ನೀಡಲಾಗುವುದು" ಎಂದು ಸ್ಪಷ್ಟಪಡಿಸಿದರು.
ಭಾರತದಲ್ಲಿ ಸುಸ್ಥಿರ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಬದ್ಧತೆ ಬಗೆಗೆ ನಿರ್ಣಯವನ್ನೂ ಈ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು. ಕೋವಿಡ್ ನಂತರದ ಯುಗದ ಜಾಗತಿಕ ಪುನಶ್ಚೇತನಕ್ಕೆ ಕೊಡುಗೆ ನೀಡುವಲ್ಲಿ ಭಾರತ ಮಹತ್ವದ ಪಾತ್ರ ವಹಿಸುವ ಬಗ್ಗೆಯೂ ನಿರ್ಣಯ ಆಂಗೀಕರಿಸಲಾಯಿತು. ಈ ಬಗ್ಗೆ timesofindia.com ವರದಿ ಮಾಡಿದೆ.