ನವದೆಹಲಿ :ಸಂಸತ್ತಿನ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ವೈಯುಕ್ತಿಕ ದತ್ತಾಂಶ ರಕ್ಷಣೆ ವಿಧೇಯಕವನ್ನು ಮಂಡಿಸಲಾಗುವುದು ಎಂದು ಕೇಂದ್ರ ಸರಕಾರ ಗುರುವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ವ್ಯಾಟ್ಸ್ ಆಯಪ್ ಖಾಸಗಿ ನೀತಿ 2021ರ ಕುರಿತ ವಿಚಾರಣೆಯ ಸಂದರ್ಭ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ಮಾಹಿತಿ ನೀಡಿದರು.
ಸಂಸತ್ತಿನ ಜಂಟಿ ಸಮಿತಿ ಈ ವಿಧೇಯಕಕ್ಕೆ 81 ಬದಲಾವಣೆಯ ಶಿಫಾರಸು ಹಾಗೂ 12 ಪ್ರಮುಖ ಶಿಫಾರಸುಗಳನ್ನು ಮಾಡಿದ ಬಳಿಕ ವೈಯುಕ್ತಿಕ ದತ್ತಾಂಶ ರಕ್ಷಣಾ ವಿಧೇಯಕ-2019 ಅನ್ನು ಆಗಸ್ಟ್ 3ರಂದು ಹಿಂಪಡೆಯಲಾಗಿತ್ತು. ಸ್ಪಷ್ಟ ಒಪ್ಪಿಗೆ ಇಲ್ಲದೆ ಜನರ ವೈಯುಕ್ತಿಕ ಮಾಹಿತಿಯನ್ನು ಬಳಸುವ ಕುರಿತು ನಿರ್ಬಂಧವನ್ನು ಪ್ರಸ್ತಾಪಿಸುವ ಈ ವಿಧೇಯಕಕ್ಕೆ ಕೇಂದ್ರ ಸಂಪುಟ 2019 ಡಿಸೆಂಬರ್‌ನಲ್ಲಿ ಅನುಮೋದನೆ ನೀಡಿತ್ತು.