ಕೊಚ್ಚಿ: ಮಹತ್ವದ ಬೆಳವಣಿಗೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರದಿಂದ 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿರುವ PFI ಸಂಘಟನೆ ಇದೀಗ ತನ್ನನ್ನು ತಾನೇ ವಿಸರ್ಜಿಸಿದೆ.
ಪಿಎಫ್‌ಐನ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ವಿಸರ್ಜಿಸಿರುವುದಾಗಿ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಅಧಿಕೃತ ಪ್ರಕಟನೆ ನೀಡಿರುವ ಅವರು, 'ಎಲ್ಲಾ PFI ಸದಸ್ಯರು ಮತ್ತು ಸಾರ್ವಜನಿಕರಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ವಿಸರ್ಜಿಸಲಾಗಿದೆ ಎಂದು ತಿಳಿಸಲು ಇಚ್ಚಿಸುತ್ತೇವೆ. ಕೇಂದ್ರ ಗೃಹ ಇಲಾಖೆ PFI ಅನ್ನು ನಿಷೇಧಿಸುವ ಅಧಿಸೂಚನೆಯನ್ನು ಹೊರಡಿಸಿದೆ. ನಮ್ಮ ಮಹಾನ್ ದೇಶದ ಕಾನೂನು ಪಾಲಿಸುವ ನಾಗರಿಕರಾಗಿ, ಸಂಘಟನೆಯು ನಿರ್ಧಾರವನ್ನು ಒಪ್ಪಿಕೊಳ್ಳುತ್ತದೆ ಎಂದು ಸತ್ತಾರ್ ಹೇಳಿದ್ದಾರೆ.
ಕಾನೂನು ಬಾಹಿರ ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿರುವ ಮತ್ತು ಐಸಿಸ್‌ನಂತಹ ಜಾಗತಿಕ ಭಯೋತ್ಪಾದಕ ಗುಂಪುಗಳೊಂದಿಗೆ "ಸಂಪರ್ಕ" ಹೊಂದಿರುವ ಪಿಎಫ್‌ಐ ಅನ್ನು ಅದರ ನಾಯಕರ ವಿರುದ್ಧದ ಸರಣಿ ಎನ್ಐಎ ಮತ್ತು ಪೊಲೀಸ್ ದಾಳಿಗಳ ನಂತರ ಕೇಂದ್ರ ಸರ್ಕಾರ ಐದು ವರ್ಷಗಳ ಕಾಲ ನಿಷೇಧಿಸಿತ್ತು. ಅಲ್ಲದೆ ಅದರ ಹಲವಾರು ಸಹವರ್ತಿ ಸಂಘಟನೆಗಳನ್ನು ಮತ್ತು ಅವುಗಳ ಸಾಮಾಜಿಕ ಖಾತೆಗಳು, ವೆಬ್ ಸೈಟ್ ಗಳನ್ನು ಕೂಡ ನಿಷೇಧಿಸಿ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಿದೆ.
ಅಬ್ದುಲ್ ಸತ್ತಾರ್ ಬಂಧನ
ಸತ್ತಾರ್ ಫೇಸ್‌ಬುಕ್ ಪುಟದಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳ ನಂತರ
ಅವರನ್ನು ರಾಜ್ಯದ ಅಲಪ್ಪುಳದಿಂದ ಬಂಧಿಸಲಾಗಿದೆ. ಸಂಘಟನೆಯ ಕಚೇರಿಗಳ ಮೇಲೆ
ರಾಷ್ಟ್ರವ್ಯಾಪಿ ದಾಳಿಗಳು ಮತ್ತು ಅದರ ನಾಯಕರ ಬಂಧನವನ್ನು ವಿರೋಧಿಸಿ ಸೆಪ್ಟೆಂಬರ್ 23
ರಂದು ರಾಜ್ಯಾದ್ಯಂತ ಹರತಾಳಕ್ಕೆ ಕರೆ ನೀಡಿದ ನಂತರ ತಲೆಮರೆಸಿಕೊಂಡಿದ್ದ ಸತ್ತಾರ್
ಅವರನ್ನು ಒಂದು ದಿನದ ನಂತರ ಎನ್‌ಐಎಗೆ ಹಸ್ತಾಂತರಿಸುವ ಸಾಧ್ಯತೆಯಿದೆ.
ಪ್ರತಿಭಟನೆ ವೇಳೆ ಹಿಂಸಾಚಾರ
ಸೆಪ್ಟೆಂಬರ್ 23 ರ ಹರತಾಳದ ಸಮಯದಲ್ಲಿ, ಅದರ ಕಾರ್ಯಕರ್ತರು ವ್ಯಾಪಕ ಹಿಂಸಾಚಾರದಲ್ಲಿ
ತೊಡಗಿದ್ದರು. ಇದರ ಪರಿಣಾಮವಾಗಿ ಬಸ್ಸುಗಳು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಮತ್ತು
ಸಾರ್ವಜನಿಕರ ಮೇಲೆ ದಾಳಿ ನಡೆಸಲಾಯಿತು. ಎನ್‌ಐಎ ನೇತೃತ್ವದ ಬಹು-ಏಜೆನ್ಸಿ ತಂಡಗಳು ಕಳೆದ
ವಾರ ದೇಶಾದ್ಯಂತ 15 ರಾಜ್ಯಗಳ 93 ಸ್ಥಳಗಳಲ್ಲಿ ದಾಳಿ ನಡೆಸಿ 100 ಕ್ಕೂ ಹೆಚ್ಚು
ಪಿಎಫ್‌ಐ ಮುಖಂಡರನ್ನು ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸಿದ ಆರೋಪದ
ಮೇಲೆ ಬಂಧಿಸಿದ್ದವು. ಕೇರಳದಲ್ಲಿ ಗರಿಷ್ಠ 22 ಮಂದಿಯನ್ನು ಬಂಧಿಸಲಾಗಿದೆ. ರಾಷ್ಟ್ರೀಯ
ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ (ED) ಮತ್ತು ಸಂಬಂಧಪಟ್ಟ ರಾಜ್ಯಗಳ ಪೊಲೀಸ್
ಪಡೆಗಳು ಕಾರ್ಯಕರ್ತರನ್ನು ಬಂಧಿಸಿವೆ.