ಉತ್ತರಕಾಶಿ: ಉತ್ತರಾಖಂಡ್ ನ ದಾಂಡ-2 ಪರ್ವತ ಶಿಖರ ಪ್ರದೇಶದಲ್ಲಿ ಅ.04 ರಂದು ಹಿಮಕುಸಿತ ಉಂಟಾಗಿದ್ದು, 10 ಮಂದಿ ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 8 ಮಂದಿಯನ್ನು ರಕ್ಷಿಸಲಾಗಿದೆ.
ತರಬೇತಿ ನಿರತ 34 ಪರ್ವತಾರೋಹಿಗಳು ಹಾಗೂ ನೆಹರು ಪರ್ವತಾರೋಹಣ ಸಂಸ್ಥೆಯ ಸುಮಾರು 7
ಮಾರ್ಗದರ್ಶಕರು ಶಿಖರ ಪ್ರದೇಶದಿಂದ ವಾಪಸ್ಸಾಗುವಾಗ ಹಿಮಕುಸಿತಕ್ಕೆ ಸಿಲುಕಿದ್ದರು. ಹಿಮದ
ಅಡಿಯಲ್ಲಿ ಸಿಲುಕಿರುವ 10 ಮೃತದೇಹಗಳ ಪೈಕಿ ನಾಲ್ಕನ್ನು ಹೊರತೆಗೆಯಲಾಗಿದ್ದು,
ಬೆಳಿಗ್ಗೆ 8:45 ರ ವೇಳೆಗೆ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉತ್ತರ ಕಾಶಿಯ ವಿಪತ್ತು ನಿರ್ವಹಣಾ ಅಧಿಕಾರಿ ದೇವೇಂದ್ರ ಪಟ್ವಾಲ್ ಈ ಬಗ್ಗೆ
ಮಾತನಾಡಿದ್ದು, ಹಿಮದ ಅಡಿಯಲ್ಲಿ ಸಿಲುಕಿದ 8 ಮಂದಿಯನ್ನು ರಕ್ಷಿಸಲಾಗಿದೆ ಎಂದು
ತಿಳಿಸಿದ್ದಾರೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಸೇನೆ ಹಾಗೂ ಐಟಿಬಿಪಿ
ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದರು.
ಸಿಎಂ ಧಾಮಿ ಪ್ರತಿಕ್ರಿಯೆ ನೀಡಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಾತನಾಡಿ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲು ಸೇನೆಯ ನೆರವು ಕೇಳಲಾಗಿದೆ ಎಂದು ತಿಳಿಸಿದ್ದಾರೆ.