ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ನಂತರ ವಿಶ್ವದಾದ್ಯಂತ ಹಲವಾರು ದೇಶಗಳು ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳ ಹೊಡೆತವನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.
ಹಂತ ಹಂತವಾಗಿ 10 ಲಕ್ಷ ಹುದ್ದೆಗಳ ನೇಮಕ ಮಾಡಿಕೊಳ್ಳುವ “ರೋಜ್‌ಗಾರ್ ಮೇಳ”ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ ಬಳಿಕ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಯುವಜನರಿಗೆ ಗರಿಷ್ಠ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೇಂದ್ರವು ಅನೇಕ ವಲಯಗಳಲ್ಲಿ ಕೆಲಸ ಮಾಡುತ್ತಿದೆ. ಜಾಗತಿಕ ಪರಿಸ್ಥಿತಿಯು ಉತ್ತಮವಾಗಿಲ್ಲ ಎಂಬುದು ಸತ್ಯ. ಹಲವಾರು ದೊಡ್ಡ ರಾಷ್ಟ್ರಗಳು ಆರ್ಥಿಕ ಸಮಸ್ಯೆ ಎದುರಿಸುವಲ್ಲಿ ಹೆಣಗಾಡುತ್ತಿವೆ. ಹಣದುಬ್ಬರ ಮತ್ತು ನಿರುದ್ಯೋಗದಂತಹ ಸಮಸ್ಯೆಗಳು ಉತ್ತುಂಗದಲ್ಲಿದೆ. ಶತಮಾನಕ್ಕೊಮ್ಮೆ ಬರುವ ಸಾಂಕ್ರಾಮಿಕ ರೋಗದ ಅಡ್ಡ ಪರಿಣಾಮಗಳು 100 ದಿನಗಳಲ್ಲಿ ಹೋಗುವುದಿಲ್ಲ ಎಂದು ಹೇಳಿದರು.
ಈ ಬಿಕ್ಕಟ್ಟು ಪ್ರಪಂಚದ ಹಲವು ರಾಷ್ಟ್ರಗಳು ಎದುರಿಸುತ್ತಿದೆ, ಈ ಸಮಸ್ಯೆಯಿಂದ ನಮ್ಮ ರಾಷ್ಟ್ರ ರಕ್ಷಿಸಲು ಹೊಸ ಉಪಕ್ರಮಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳುತ್ತಿದೆ. ಇದು ಸವಾಲಿನ ಕೆಲಸ, ಆದರೆ ನಿಮ್ಮ ಆಶೀರ್ವಾದದಿಂದ ನಾವು ಇಲ್ಲಿಯವರೆಗೆ ರಕ್ಷಿಸಲ್ಪಟ್ಟಿದ್ದೇವೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಪ್ರಧಾನಿಯವರು 75,000 ಉದ್ಯೋಗಾಕಾಂಕ್ಷಿಗಳಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಿದರು.
ದೇಶದಾದ್ಯಂತ ಆಯ್ಕೆಯಾದ ಹೊಸ ನೇಮಕಾತಿಗಳು ಭಾರತ ಸರ್ಕಾರದ 38 ಸಚಿವಾಲಯಗಳು ಅಥವಾ ಇಲಾಖೆಗಳಿಗೆ ಸೇರಿಕೊಳ್ಳುತ್ತವೆ. ಕೇಂದ್ರ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ, ಅಂಚೆ, ಗೃಹ ಇಲಾಖೆ, ಕಾರ್ಮಿಕ ಇಲಾಖೆ, ಸಿಬಿಐ, ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗಿಗಳಿಗೆ ನೇಮಕಾತಿ ಪತ್ರ ನೀಡಲಾಗುತ್ತದೆ. ಇಂದು ನೇಮಕಗೊಂಡವರು ಎ, ಬಿ ಮತ್ತು ಸಿ ಹಂತಗಳಲ್ಲಿ ಸರ್ಕಾರಕ್ಕೆ ಸೇರುತ್ತಾರೆ. ನೇಮಕಾತಿಗಳನ್ನು ಮಾಡಲಾಗುತ್ತಿರುವ ಹುದ್ದೆಗಳಲ್ಲಿ ಕೇಂದ್ರ ಸಶಸ್ತ್ರ ಪಡೆ ಸಿಬ್ಬಂದಿ, ಸಬ್ ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಎಲ್‌ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇನ್ಸ್‌ಪೆಕ್ಟರ್‌ಗಳು ಮತ್ತು ಎಂಟಿಎಸ್ ಕೂಡ ಸೇರಿವೆ.
ಈ ನೇಮಕಾತಿಗಳನ್ನು ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಅಥವಾ ಯುಪಿಎಸ್ಸಿ, ಎಸ್ಎಸ್ಸಿ ಮತ್ತು ರೈಲ್ವೇ ನೇಮಕಾತಿ ಮಂಡಳಿ ಸೇರಿದಂತೆ ನೇಮಕಾತಿ ಏಜೆನ್ಸಿಗಳ ಮೂಲಕ ಮಿಷನ್ ಮೋಡ್‌ನಲ್ಲಿ ಮಾಡಲಾಗುತ್ತದೆ.