ಗಾಂಧಿನಗರ್: ಚಾಲುಕ್ಯರು ಕಟ್ಟಿದ ಸೂರ್ಯ ದೇವಾಲಯಕ್ಕೆ ಪ್ರಸಿದ್ಧವಾದ ಈ ಹಳ್ಳಿಯನ್ನು ಪ್ರಧಾನಿ ಮೋದಿ ಭಾನುವಾರ 24/7 ಸೌರ ಚಾಲಿತ ಹಳ್ಳಿ ಎಂದು ಘೋಷಿಸಿದರು. ಅಂದಹಾಗೆ ಈ ಹಳ್ಳಿಯ ಹೆಸರು ಮೊಧೆರಾ.
ಪ್ರಧಾನಿ ಮೋದಿ ರೂ.3,900 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ 'ನಾವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಬಳಸುವ ಮೂಲಕ ಇಡಿ ವಿಶ್ವಕ್ಕೆ ವಿದ್ಯುತ್ ಪೂರೈಕೆದಾರ ಆಗಬಹುದು' ಎಂದರು.
ಈ ಹಳ್ಳಿ ಗುಜರಾತ್ನ ರಾಜಧಾನಿ ಗಾಂಧಿನಗರದಿಂದ 100 ಕಿ.ಮೀ ದೂರದಲ್ಲಿದೆ. ಇಲ್ಲಿ 1300ಕ್ಕೂ ಹೆಚ್ಚು ಮೇಲ್ಛಾವಣಿಗೆ ಅಳವಡಿಸುವ ಸೋಲಾರ್ ಪ್ಯಾನಲ್ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತೀ ಸೋಲಾರ್ ಪ್ಯಾನಲ್ 1 ಕಿಲೊ ವ್ಯಾಟ್ ವಿದ್ಯುತ್ತನ್ನು ಉತ್ಪಾದಿಸುತ್ತದೆ. ಈ ಹಳ್ಳಿಯಲ್ಲಿ ಎಲ್ಲಾ ಪ್ಯಾನಲ್ಗಳನ್ನು ಬಿಇಎಸ್ಎಸ್ (ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಂ) ನೊಂದಿಗೆ ಜೋಡಿಸಲಾಗಿದೆ. ದಿನದಲ್ಲಿ ಸೋಲಾರ್ ಪ್ಯಾನಲ್ಗಳು ನೇರವಾಗಿ ಮನೆಗಳಿಗೆ ವಿದ್ಯುತ್ ಪೂರೈಸಿದರೆ ರಾತ್ರಿ ಬ್ಯಾಟರಿಯಿಂದ ವಿದ್ಯುತ್ ಸರಬರಾಜಾಗುತ್ತದೆ.
'ಈ ಯೋಜನೆಯು ನವೀಕರಿಸಬಹುದಾದ ಇಂಧನ ಜನರನ್ನು ತಳಮಟ್ಟದಲ್ಲಿ ಯಾವ ರೀತಿ ಸಬಲರನ್ನಾಗಿಸುತ್ತದೆ ಎಂಬುದನ್ನು ತೋರಿಸುತ್ತದೆ. ಈ ಕ್ರಮದಿಂದ ಹಳ್ಳಿಯ ಜನರು ತಮ್ಮ ವಿದ್ಯುತ್ ಬಿಲ್ನಲ್ಲಿ ಶೇಕಡಾ 60ಕ್ಕಿಂತ ಹೆಚ್ಚು ಮೊತ್ತವನ್ನು ಉಳಿಸಬಹುದು' ಎಂದು ಗುಜರಾತ್ ಸರ್ಕಾರ ಹೇಳಿದೆ.