ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ (ಗ್ಲೋಬಲ್ ಹಂಗರ್ ಇಂಡೆಕ್ಸ್-ಜಿಎಚ್ಐ) ಭಾರತ 101ನೇ ಸ್ಥಾನದಿಂದ 107ಕ್ಕೆ ಕುಸಿದು ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ನೇಪಾಳಕ್ಕಿಂತಲೂ ಹಿಂದೆ ಬಿದ್ದಿದೆ. ಒಟ್ಟು 121 ದೇಶಗಳಿಗೆ ಸಂಬಂಧಿಸಿದ ಸೂಚ್ಯಂಕವನ್ನು ಐರಿಷ್ ಸಂಸ್ಥೆ ಕನ್ಸರ್ನ್ ವರ್ಲ್ಡ್ ವೈಡ್ ಮತ್ತು ಮತ್ತು ಜರ್ಮನಿಯ ವೆಲ್ಟ್ ಹಂಗರ್ ಹಿಲ್ಪೆ ಸಂಸ್ಥೆಗಳು ಜಂಟಿಯಾಗಿ ರೂಪಿಸಿವೆ.
ಚೀನಾ, ಟರ್ಕಿ ಮತ್ತು ಕುವೈತ್ ಒಳಗೊಂಡಂತೆ 17 ದೇಶಗಳು 5ಕ್ಕಿಂತ ಕಡಿಮೆ ಅಂಕದೊಂದಿಗೆ ಉನ್ನತ ಸ್ಥಾನವನ್ನು ಹಂಚಿಕೊಂಡಿವೆ.
ಅನುಸರಿಸಿದ ವಿಧಾನ ಸರಿಯಿಲ್ಲ: ಭಾರತ 107ನೇ ರ್ಯಾಂಕ್ಗೆೆ ಕುಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜಿಎಚ್ಐ ವರದಿಯ ಲೆಕ್ಕಾಚಾರಕ್ಕೆ ಬಳಸಿರುವ (ಮೆಥಡಾಲಜಿ)ವಿಧಾನವನ್ನು ಖಂಡಿಸಿದೆ. ಅದು ಆಘಾತಕಾರಿ ಹಾಗೂ ವಾಸ್ತವಾಂಶಗಳಿಲ್ಲದ ವಿಶ್ವಾಸಕ್ಕೆ ಅರ್ಹವಲ್ಲದ ತಪ್ಪು ವರದಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಹೇಳಿದೆ. ಕಳೆದ ವರ್ಷ ಭಾರತ 100ನೇ ಸ್ಥಾನಕ್ಕಿಂತ ಕೆಳಗೆ ಇಳಿದಾಗಲೂ ಜಿಎಚ್ಐ ವರದಿಯನ್ನು ಸರ್ಕಾರ ತರಾಟೆಗೆ ತೆಗೆದು ಕೊಂಡಿತ್ತು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ (ಎಫ್ಎಒ) ಅಂದಾಜನ್ನು ಆಧರಿಸಿದ ಜಿಎಚ್ಐ ರ‍್ಯಾಂಕಿಂಗ್ ಸೂಕ್ತವಾದುದಲ್ಲ ಎಂಬುದು ಭಾರತದ ವಾದವಾಗಿದೆ. ಎಫ್ಎಒ ಬಳಸುವ ವಿಧಾನವೇ ಅವೈಜ್ಞಾನಿಕ ಎಂದು ಸರ್ಕಾರ ಕಳೆದ ವರ್ಷವೂ ಹೇಳಿತ್ತು.
ಅಮೆರಿಕ ಪತ್ರಿಕೆಯಲ್ಲಿ ಭಾರತ ವಿರೋಧಿ ಜಾಹೀರಾತು: ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ಪತ್ರಿಕೆಯು ಪೂರ್ಣ ಪುಟದ ಜಾಹೀರಾತು ಪ್ರಕಟಿಸಿದ್ದು, ಅದರಲ್ಲಿ ಭಾರತವನ್ನು ಹೂಡಿಕೆಗೆ ಅಸುರಕ್ಷಿತ ಸ್ಥಳ ಎಂದು ಹೇಳಲಾಗಿದೆ. ಈ ಜಾಹೀರಾತಿನ ತುಣುಕನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದ ಹಿರಿಯ ಸಲಹೆಗಾರ್ತಿ ಕಾಂಚನ್ ಗುಪ್ತಾ ಹಂಚಿಕೊಂಡಿದ್ದಾರೆ. 'ಮೋದಿಯ ಮ್ಯಾಗ್ನಿಟ್ಸ್ಕೈ, ಭಾರತದಲ್ಲಿ ಹೂಡಿಕೆ ಮಾಡಲು ಅಸುರಕ್ಷಿತ ಸ್ಥಳವನ್ನಾಗಿ ಮಾಡಿದ 11 ಅಧಿಕಾರಿಗಳನ್ನು ಭೇಟಿ ಮಾಡಿ' ಎಂಬ ಶೀರ್ಷಿಕೆಯ ಜಾಹೀರಾತಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಆಂಟ್ರಿಕ್ಸ್ ಕಾರ್ಪ್ ಅಧ್ಯಕ್ಷ ರಾಕೇಶ್ ಶಶಿಭೂಷಣ್ ಅವರ ಚಿತ್ರಗಳಿವೆ. ಈ ಜಾಹೀರಾತು ತೀವ್ರ ಟೀಕೆಗೆ ಗುರಿಯಾಗಿದೆ.
ಹೈದರಾಬಾದ್ಗೆ ವಿಶ್ವ ಹಸಿರು ನಗರ ಪಟ್ಟ: ತೆಲಂಗಾಣ ರಾಜಧಾನಿ ಹೈದರಾಬಾದ್ 'ವಿಶ್ವ ಹಸಿರು ನಗರ-2022' ಪ್ರಶಸ್ತಿ ಗೆದ್ದುಕೊಂಡಿದೆ. ಹೈದರಾಬಾದ್, ಈ ಗೌರವಕ್ಕೆ ಪಾತ್ರವಾಗಿರುವ ಭಾರತದ ಏಕೈಕ ನಗರವಾಗಿದೆ. ವರ್ಲ್ಡ್ ಗ್ರೀನ್ ಸಿಟಿ ಅವಾರ್ಡ್ ಅಲ್ಲದೆ 'ಲಿವಿಂಗ್ ಗ್ರೀನ್ ಫಾರ್ ಇಕನಾಮಿಕ್ ರಿಕವರಿ ಆಂಡ್ ಇನ್ಕ್ಲೂಸಿವ್ ಗ್ರೋತ್' ವಿಭಾಗದಲ್ಲೂ ಹೈದರಾಬಾದ್ ಪ್ರಶಸ್ತಿ ಗಳಿಸಿದೆ. ದಕ್ಷಿಣ ಕೊರಿಯಾದ ಜೇಜು ನಗರದಲ್ಲಿ ಶುಕ್ರವಾರ (ಅಕ್ಟೋಬರ್ 14) ನಡೆದ ಎಐಪಿಎಚ್ ಸಮ್ಮೇಳನದಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಯಿತು.