ನವದೆಹಲಿ: 10 ವರ್ಷಗಳ ಹಿಂದೆ ಆಧಾರ್ ಪಡೆದು, ಈವರೆಗೆ ತಮ್ಮ ಮಾಹಿತಿಯನ್ನು ನವೀಕರಿಸದೇ ಇರುವವರು ಹೊಸದಾಗಿ ತಮ್ಮ ಗುರುತು ಮತ್ತು ಮನೆಯ ವಿಳಾಸದ ದಾಖಲಾತಿಗಳನ್ನು ಸಲ್ಲಿಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಡಿಎಐ) ತಿಳಿಸಿದೆ.
ಆನ್‌ಲೈನ್ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಹಿತಿ ಅಪ್‌ಡೇಟ್ ಮಾಡಬಹುದಾಗಿದೆ ಎಂದು ಯುಐಡಿಎಐ ಪ್ರಕಟಣೆಯಲ್ಲಿ ತಿಳಿಸಿದೆ.
10 ವರ್ಷಗಳ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆ ಪಡೆದಿದ್ದವರು, ಈವರೆಗೆ ತಮ್ಮ ಮಾಹಿತಿಗಳ ಬಗ್ಗೆ ಅಪ್‌ಡೇಟ್ ಮಾಡದೇ ಇದ್ದರೆ, ಕೂಡಲೇ ತಮ್ಮ ದಾಖಲಾತಿಗಳನ್ನು ಅಪ್‌ಡೇಟ್ ಮಾಡಬೇಕೆಂದು ವಿನಂತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆಧಾರ್ ಮಾಹಿತಿ ನವೀಕರಣ ಕಡ್ಡಾಯವೇ ಎಂಬ ಬಗ್ಗೆ ಪ್ರಾಧಿಕಾರ ಸ್ಪಷ್ಟನೆ ನೀಡಿಲ್ಲ.
ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆಗಳು ಮತ್ತು ಮನೆಯ ವಿಳಾಸದ ಮಾಹಿತಿ ನವೀಕರಣ ಮಾಡಬಹುದಾಗಿದೆ ಎಂದು ಅದು ಹೇಳಿದೆ.
'My Aadhaar ಪೋರ್ಟಲ್ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾಹಿತಿ ನವೀಕರಿಸಬಹುದು'ಎಂದು ಅದು ಸೇರಿಸಿದೆ.
ಆಧಾರ್ ಕಾರ್ಡ್‌ನಲ್ಲಿ ಕಣ್ಣಿನ ಪಾಪೆ, ಫಿಂಗರ್‌ಪ್ರಿಂಟ್ ಮತ್ತು ಛಾಯಾಚಿತ್ರಗಳ ಮೂಲಕ ಗುರುತಿಸುವಿಕೆಯನ್ನು ದಾಖಲು ಮಾಡಲಾಗುತ್ತದೆ.
ಕಳೆದ 10 ವರ್ಷಗಳಿಂದ ದೇಶದಲ್ಲಿ ಆಧಾರ್ ಸಂಖ್ಯೆಯು ವ್ಯಕ್ತಿಗಳ ಪ್ರಮುಖ ಗುರುತಿನ ಮೂಲವಾಗಿ ಹೊರಹೊಮ್ಮಿದೆ ಎಂದು ಹೇಳಿಕೆ ತಿಳಿಸಿದೆ. ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳಲ್ಲಿ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ.
ಸರ್ಕಾರಿ ಪ್ರಯೋಜನಗಳನ್ನು ಪಡೆಯಲು, ಗುರುತಿಸುವಿಕೆ/ಪ್ರಮಾಣೀಕರಣದಲ್ಲಿ ಯಾವುದೇ ಅನಾನುಕೂಲತೆಯನ್ನು ತಪ್ಪಿಸಲು ಜನರು ತಮ್ಮ ಆಧಾರ್ ಡೇಟಾವನ್ನು ನವೀಕರಿಸಬೇಕು ಎಂದು ಅದು ಹೇಳಿದೆ.