ನವದೆಹಲಿ: 10 ಲಕ್ಷ ಜನರಿಗೆ ಉದ್ಯೋಗ ನೀಡುವ ಉದ್ದೇಶದ 'ರೋಜ್‌ಗಾರ್ ಮೇಳ'ಕ್ಕೆ (ಉದ್ಯೋಗ ಮೇಳ) ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಆಗಿ ಶನಿವಾರ ಚಾಲನೆ ನೀಡಿದರು. ಮೊದಲ ಹಂತದಲ್ಲಿ 75,000 ಜನರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗದ ನೇಮಕಾತಿ ಪತ್ರಗಳನ್ನು ನೀಡಲಾಯಿತು.
ನಿರುದ್ಯೋಗ ವಿಚಾರವಾಗಿ ಸರ್ಕಾರದ ವಿರುದ್ಧ ನಿರಂತರವಾಗಿ ಟೀಕಾಪ್ರಹಾರ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ರೋಜ್‌ಗಾರ್ ಮೇಳದ ಮೂಲಕ ತಿರುಗೇಟು ನೀಡಿರುವ ಪ್ರಧಾನಿ, ಕಳೆದ ಎಂಟು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಗೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.
ಜಗತ್ತಿನ ಹಲವು ದೇಶಗಳು ದಾಖಲೆಯ ಹಣದುಬ್ಬರ ಹಾಗೂ ನಿರುದ್ಯೋಗದ ಸವಾಲು ಎದುರಿಸಿ ಏದುಸಿರು ಬಿಡುತ್ತಿರುವ ಈ ಸಮಯದಲ್ಲಿ, ತಮ್ಮ ಸರ್ಕಾರವು ಇಂತಹ ಅಪಾಯದಿಂದ ಪಾರಾಗಲು ಸಾಧ್ಯವಿರುವ ಎಲ್ಲ ಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. 'ಜಾಗತಿಕ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ದೊಡ್ಡ ಆರ್ಥ ವ್ಯವಸ್ಥೆ ಹೊಂದಿರುವ ದೇಶಗಳೇ ಬಿಕ್ಕಟ್ಟಿನಲ್ಲಿವೆ. ಹಣದುಬ್ಬರ, ನಿರುದ್ಯೋಗದಂತಹ ಸಮಸ್ಯೆಗಳು ಅಪಾಯಕಾರಿ ಹಂತಕ್ಕೆ ತಲುಪಿವೆ. ಕೋವಿಡ್ ಸಾಂಕ್ರಾಮಿಕವು ಎಲ್ಲ ಕಡೆ ಪ್ರತಿಕೂಲ ಪರಿಣಾಮ ಉಂಟುಮಾಡಿದೆ' ಎಂದು ಅವರು ಜಾಗತಿಕ ವಿದ್ಯಮಾನವನ್ನು ವಿವರಿಸಿದರು.
ನೇಮಕಗೊಂಡವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಉತ್ಪಾದನೆ, ಮೂಲಸೌಕರ್ಯ, ಪ್ರವಾಸೋದ್ಯಮ ಒಳಗೊಂಡಂತೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ, ಉದ್ಯೋಗ ಅವಕಾಶಗಳು ಹೆಚ್ಚಿವೆ ಎಂದರು. ಸರ್ಕಾರಿ ಇಲಾಖೆಗಳ ದಕ್ಷತೆ ಹೆಚ್ಚಳವಾಗಿರುವ ಕಾರಣ, ಕಳೆದ ಎಂಟು ವರ್ಷಗಳ ಅವಧಿಯಲ್ಲಿ, ಭಾರತವು ಬೃಹತ್ ಆರ್ಥವ್ಯವಸ್ಥೆಯ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಸ್ಥಾನಕ್ಕೆ ಜಿಗಿದಿದೆ ಎಂದು ಹೇಳಿದರು.
ಉದ್ಯಮಗಳ ಆರಂಭಕ್ಕೆ ನೆರವು ನೀಡುವ ಮುದ್ರಾ ಯೋಜನೆಯಲ್ಲಿ ದಾಖಲೆ ಪ್ರಮಾಣದ ಸಾಲ ವಿತರಣೆ ಆಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಕೋವಿಡ್ ಅವಧಿಯಲ್ಲಿ ಸುಮಾರು ₹3 ಲಕ್ಷ ಕೋಟಿಯಷ್ಟು ನೆರವು ನೀಡಿದ್ದರಿಂದ ಸೂಕ್ಷ್ಮ, ಸಣ್ಣ, ಮಧ್ಯಮ ಪ್ರಮಾಣದ (ಎಂಎಸ್‌ಎಂಇ) ವಲಯದ ಕೈಗಾರಿಕೆಗಳಲ್ಲಿ 1.5 ಕೋಟಿಗಿಂತಲೂ ಹೆಚ್ಚು ಉದ್ಯೋಗಗಳು ಬಿಕ್ಕಟ್ಟಿಗೆ ಸಿಲುಕುವುದು ತಪ್ಪಿತು ಎಂದು ಹೇಳಿದರು.
ದೇಶದ ಯುವಜನರಿಗೆ ಉದ್ಯೋಗದ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರವು ಹಲವು ಆಯಾಮಗಳಲ್ಲಿ ಕೆಲಸ ಮಾಡುತ್ತಿದೆ. ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ದೇಶದ 1.25 ಕೋಟಿ ಜನರು ತರಬೇತಿ ಪಡೆದಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಒಟ್ಟಾರೆ ಮೌಲ್ಯ ಇದೇ ಮೊದಲ ಬಾರಿಗೆ ₹4 ಲಕ್ಷ ಕೋಟಿ ದಾಟಿದೆ. ಈ ವಲಯದಲ್ಲಿ 4 ಕೋಟಿ ಉದ್ಯೋಗ ಸೃಷ್ಟಿಯಾಗಿವೆ. ನರೇಗಾ ಉದ್ಯೋಗ ಕಾರ್ಯಕ್ರಮದಿಂದ ದೇಶದ 7 ಕೋಟಿ ಜನರಿಗೆ ಅನುಕೂಲವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಉದ್ಯೋಗ ಹಾಗೂ ಸ್ವಉದ್ಯೋಗ ಸೃಷ್ಟಿಯಲ್ಲಿ 'ರೋಜ್‌ಗಾರ್ ಮೇಳ' ಒಂದು ಪ್ರಮುಖ ಮೈಲಿಗಲ್ಲು' ಎಂದು ಪ್ರಧಾನಿ ಹೇಳಿದರು.