ನವದೆಹಲಿ:ಮುಂಬೈ ಮೂಲದ ಎಬಿ ಜನರಲ್ ಎಲೆಕ್ಟೊರಲ್ ಟ್ರಸ್ಟ್, ಬಿಜೆಪಿಗೆ 2021-22ನೇ ಹಣಕಾಸು ವರ್ಷದಲ್ಲಿ 10 ಕೋಟಿ ರೂಪಾಯಿ ದೇಣಿಗೆ ನೀಡಿರುವುದನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಈ ಬಗ್ಗೆ newindianexpress.com ವರದಿ ಮಾಡಿದೆ.
ಹಿಂಡಲ್ಕೊ ಇಂಡಸ್ಟ್ರೀಸ್ ಲಿಮಿಟೆಡ್‍ನಿಂದ ತಲಾ ಐದು ಕೋಟಿ ರೂಪಾಯಿಗಳ ಎರಡು ಕಂತನ್ನು ಟ್ರಸ್ಟ್ ಪಡೆದಿದ್ದು, ಆ ಮೊತ್ತವನ್ನು ಬಿಜೆಪಿಗೆ 5 ಕೋಟಿ ರೂಪಾಯಿಗಳ ಎರಡು ಕಂತುಗಳಲ್ಲಿ ನೀಡಿರುವ ಅಂಶ ದೃಢಪಟ್ಟಿದೆ.
ಚೆನ್ನೈ ಮೂಲದ ಟ್ರಿಯಫ್ ಎಲೆಕ್ಟೊರಲ್ ಟ್ರಸ್ಟ್ ಟ್ಯೂಬ್ ಇನ್‍ವೆಸ್ಟ್ ಮೆಂಟ್ಸ್ ಆಫ್ ಇಂಡಿಯಾ ಲಿಮಿಟೆಡ್‍ನಿಂದ 50 ಲಕ್ಷ ರೂಪಾಯಿ ದೇಣಿಗೆ ಪಡೆದು, ಮೊತ್ತವನ್ನು ದ್ರಾವಿಡ ಮುನ್ನೇತ್ರ ಕಝಗಂಗೆ ವರ್ಗಾಯಿಸಿದೆ. ಉಭಯ ಟ್ರಸ್ಟ್ ಗಳು ತಮ್ಮ ದೇಣಿಗೆ ಬಗೆಗಿನ ವಾರ್ಷಿಕ ಹೇಳಿಕೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಇವುಗಳನ್ನು ಮಂಗಳವಾರ ಪಬ್ಲಿಕ್ ಡೊಮೈನ್‍ಗಳಲ್ಲಿ ಹಾಕಲಾಗಿದೆ.
ಎಲೆಕ್ಟೊರಲ್ ಟ್ರಸ್ಟ್‌ಗಳು ಲಾಭರಹಿತ ಸಂಸ್ಥೆಗಳಾಗಿದ್ದು, ಸಾರ್ವಜನಿಕರು ಅಥವಾ ಕಂಪನಿಗಳಿಂದ ದೇಣಿಗೆಯನ್ನು ಸ್ವೀಕರಿಸಿ ರಾಜಕೀಯ ಪಕ್ಷಗಳಿಗೆ ವರ್ಗಾಯಿಸುವ ಸಂಸ್ಥೆಗಳಾಗಿವೆ. ಈ ಟ್ರಸ್ಟ್‌ಗಳಿಗೆ ತೆರಿಗೆ ವಿನಾಯಿತಿ ಇರುತ್ತದೆ ಎಂದು newindianexpress.com ವರದಿ ಮಾಡಿದೆ.