ಕೊಯಿಕ್ಕೋಡ್: ಕೌಟುಂಬಿಕ ಕಲಹದಿಂದಾಗಿ ತಂದೆಯ ಕುಟುಂಬದಿಂದಲೇ ಅಹಹರಣಕ್ಕೆ ಒಳಗಾಗಿ ತಾಯಿಯಿಂದ ದೂರವಾಗಿದ್ದ 12 ದಿನದ ಹಸುಗೂಸಿಗೆ ಸರಿಯಾದ ಸಮಯದಲ್ಲಿ ಎದೆ ಹಾಲು ಉಣಿಸುವ ಮೂಲಕ ಕೇರಳದ ಛೆವಾಯೂರ್ ಪೊಲೀಸ್ ಠಾಣೆಯ ಅಧಿಕಾರಿ ರಮ್ಯಾ ಅವರು ಮಾನವೀಯತೆ ಮೆರೆದಿದ್ದಾರೆ.
ಈ ಘಟನೆ ಸಂಬಂಧ ಮಾಧ್ಯಮಗಳಲ್ಲಿ ವರದಿಯಾದಾಗಿನಿಂದ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ನಡೆದಿದ್ದೇನೆಂದರೆ, ಅಕ್ಟೋಬರ್ 22ರಂದು ಪೂಲಕ್ಕಡವು ಮೂಲದ ಆಶಿಕಾ ಎಂಬಾಕೆ ಗಂಡನ ವಿರುದ್ಧ ಛೆವಾಯೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಕೌಟುಂಬಿಕ ಕಲಹದ ಬಳಿಕ ತನ್ನ ಗಂಡ ಆದಿಲ್ ಮತ್ತು ಆತನ ತಾಯಿ 12 ದಿನದ ಹಸುಗೂಸನ್ನು ಅಪಹರಿಸಿದ್ದಾರೆ ದೂರಿನಲ್ಲಿ ಉಲ್ಲೇಖಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಗುವನ್ನು ಬೆಂಗಳೂರಿಗೆ ಕರೆದೊಯ್ಯಲು ಪ್ಲಾನ್ ಮಾಡಿದ್ದಾರೆ ಎಂದು ಗೊತ್ತಾಯಿತು.
ಆಶಿಕಾಳ ಪತಿ ಮತ್ತು ಅತ್ತೆ ಮಗುವಿನೊಂದಿಗೆ ವಯನಾಡಿನ ಸುಲ್ತಾನ್ ಬಥೇರಿ ಎಂಬಲ್ಲಿ ಇದ್ದಾರೆ ಎಂಬುದು ಪೊಲೀಸರಿಗೆ ತಿಳಿಯಿತು. ತಕ್ಷಣ ಅಧಿಕಾರಿಗಳ ತಂಡವೊಂದು ಸ್ಥಳಕ್ಕೆ ತೆರಳಿ ಮಗುವನ್ನು ರಕ್ಷಣೆ ಮಾಡಿದೆ. ಈ ವೇಳೆ ಮಗುವಿನ ಆರೋಗ್ಯ ಸ್ಥಿತಿಯನ್ನು ಪೊಲೀಸ್ ಅಧಿಕಾರಿ ರಮ್ಯಾ ಗಮನಿಸಿದ್ದಾರೆ. ಮಗುವಿಗೆ ಸುಮಾರು ದಿನಗಳಿಂದ ಹಾಲುಣಿಸದಿರುವುದು ರಮ್ಯಾ ಅವರಿಗೆ ಗೊತ್ತಾಗುತ್ತದೆ. ತಕ್ಷಣ ಮಗುವನ್ನು ಕಲ್ಪೆಟ್ಟಾ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ವೈದ್ಯಕೀಯ ಪರೀಕ್ಷೆಯಲ್ಲಿ ಮಗುವಿನ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ವೈದ್ಯರು ಹೇಳುತ್ತಾರೆ.
ಆಸ್ಪತ್ರೆಗೆ ತೋರಿಸಿದ ಕೆಲ ಸಮಯದ ನಂತರ ಮಗು ಇದ್ದಕ್ಕಿದ್ದಂತೆ ಜೋರಾಗಿ ಅಳಲು ಆರಂಭಿಸುತ್ತದೆ. ತಕ್ಷಣ ರಮ್ಯಾ ಅವರು ನಾನು ಒಂದು ವರ್ಷದ ಮಗುವಿನ ತಾಯಿ, ನಾನು ಈ ಮಗುವಿಗೆ ಹಾಲು ಕುಡಿಸಬಹುದೇ ಎಂದು ವೈದ್ಯರನ್ನು ಕೇಳುತ್ತಾರೆ. ಅದಕ್ಕೆ ವೈದ್ಯರು ಅಗತ್ಯವಾಗಿ ಕೊಡಬಹುದು ಎಂದು ಅನುಮತಿ ನೀಡುತ್ತಾರೆ. ತಕ್ಷಣ ರಮ್ಯಾ ಅವರು ತನ್ನದೇ ಮಗು ಎಂಬ ಭಾವನೆಯಲ್ಲಿ ನಿತ್ರಾಣವಾಗಿದ್ದ ಮಗುವಿಗೆ ಹಾಲುಣಿಸಿ ಮಾನವೀಯತೆ ಮೆರೆಯುತ್ತಾರೆ. ತನ್ನ ವೃತ್ತಿ ಜೀವನದಲ್ಲೇ ಈ ದಿನ ಅತ್ಯಂತ ಅರ್ಥಪೂರ್ಣ ದಿನ ಎಂದು ರಮ್ಯಾ ಅವರು ಬಣ್ಣಿಸಿದ್ದಾರೆ.
ಮಗುವಿನ ತಂದೆ ಆದಿಲ್ ಎಂಬಾತನ್ನು ದೂರಿನ ಅನ್ವಯ ಬಂಧಿಸಲಾಗಿದ್ದು, ಮಗುವನ್ನು ಮರಳಿ ಆಶಿಕಾ ಮಡಿಲಿಗೆ ಮರಳಿಸಿದ್ದಾರೆ.