ಕೊಚ್ಚಿ: ಬೆಂಗಳೂರು ಸ್ಫೋಟ ಪ್ರಕರಣ ಹಾಗೂ ಅಕ್ರಮ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಆರೋಪದ ಮೇರೆಗೆ ಎನ್‌ಐಎಯಿಂದ ಬಂಧಿತರಾಗಿದ್ದ ಐವರನ್ನು ಸುಮಾರು 13 ವರ್ಷಗಳ ನಂತರ ಬಿಡುಗಡೆಗೊಳಿಸಲಾಗಿದೆ. ಸೂಕ್ತ ಸಾಕ್ಷ್ಯಾಧಾರವಿಲ್ಲದ ಕಾರಣ ಅವರನ್ನು ನ್ಯಾಯಾಲಯ ಬಿಡುಗಡೆ ಮಾಡಿದೆ.
ಎನ್‌ಐಎ ಕೊಚ್ಚಿ ವಿಶೇಷ ನ್ಯಾಯಾಲಯವು, ಬೆಂಗಳೂರು ಸ್ಫೋಟ ಪ್ರಕರಣದ ಇಬ್ಬರು ಆರೋಪಿಗಳಾದ ತಡಿಯಂತವಿಡೆ ನಝೀರ್ ಮತ್ತು ಶರಫುದ್ದೀನ್ ಹಾಗೂ ಇತರ ಮೂವರನ್ನು ಕಣ್ಣೂರಿನಿಂದ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಹೊಂದಿದ್ದ ಆರೋಪದ ಪ್ರಕರಣದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು thehindu.com ವರದಿ ಮಾಡಿದೆ.
ಈ ಆದೇಶವನ್ನು ಹೊರಡಿಸಿದ ವಿಶೇಷ ನ್ಯಾಯಾಧೀಶ ಕೆ. ಕಮನೀಸ್, ಎನ್‌ಐಎ ಸ್ವಾಧೀನಪಡಿಸಿಕೊಂಡಿದ್ದ ವಸ್ತುಗಳಿಗೂ ಹಾಗೂ ಬಂಧಿಸಲ್ಪಟ್ಟವರಿಗೂ ಯಾವುದೇ ಸಂಬಂಧವಿದೆಯೆಂದು ತೊರಿಸುವ ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆರೋಪಿಗಳು ಬಿಡುಗಡೆಗೆ ಅರ್ಹರಾಗಿದ್ದಾರೆ ಎಂದು ಗಮನಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿರುವ ವಕೀಲರು ಆರೋಪಗಳನ್ನು ರೂಪಿಸುವ ಬಗ್ಗೆ ವಾದ ಮಂಡಿಸದಿದ್ದರೂ ನ್ಯಾಯಾಲಯವು ಸ್ವತಃ ದಾಖಲೆಗಳನ್ನು ಪರಿಶೀಲಿಸಿ, ಬಿಡುಗಡೆ ಮಾಡಲು ಆದೇಶಿಸಿದೆ.
"ಆರೋಪಿಗಳು ದೇಶಾದ್ಯಂತ ಬಾಂಬ್ ಸ್ಫೋಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಸ್ಫೋಟಕ ವಸ್ತುವನ್ನು ಹೊಂದಿದ್ದರು ಮತ್ತು ಚೆಂಬುಲೋಡ್ ಗ್ರಾಮ ಪಂಚಾಯಿತಿಯ ಐದನೇ ಆರೋಪಿ ಫೈರೋಸ್ ಅವರ ಮನೆಯಲ್ಲಿ ಇದನ್ನು ಬಚ್ಚಿಟ್ಟಿದ್ದರು" ಎಂದು ಪ್ರಾಸಿಕ್ಯೂಷನ್ ವಾದ ಮಾಡಿತ್ತು. ಕೇರಳದ ಕಣ್ಣೂರಿನಲ್ಲಿ2009ರಲ್ಲಿ ಶೋಧ ನಡೆಸಿದ ಪೊಲೀಸ್ ತಂಡಕ್ಕೆ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿದ್ದವು.
ಸ್ಫೋಟಕ ವಸ್ತುಗಳ ಕಾಯಿದೆಯ ಸೆಕ್ಷನ್ 4 ರ ಅಡಿಯಲ್ಲಿ ಅಪರಾಧವನ್ನು ಸಾಬೀತುಪಡಿಸಲು, ಆರೋಪಿಯು ಜೀವಕ್ಕೆ ಅಪಾಯವನ್ನುಂಟುಮಾಡುವ ಉದ್ದೇಶದಿಂದ ಅಥವಾ ಆಸ್ತಿಗೆ ಗಂಭೀರವಾದ ಹಾನಿಯುಂಟು ಮಾಡುವ ಉದ್ದೇಶದಿಂದ ಯಾವುದೇ ಸ್ಫೋಟಕ ವಸ್ತುವನ್ನು ಹೊಂದಿದ್ದ ಅಥವಾ ಅವರ ನಿಯಂತ್ರಣದಲ್ಲಿ ಇತ್ತು ಎಂಬುದಕ್ಕೆ ಪುರಾವೆ ಇರಬೇಕು ಎಂದು ನ್ಯಾಯಾಲಯವು ಗಮನಿಸಿದೆ.
ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡ ಸ್ಫೋಟಕ ವಸ್ತುಗಳನ್ನು ಯಾವುದೇ ಆರೋಪಿಗಳು ನಿಭಾಯಿಸಿದ್ದಾರೆ ಎಂಬುದನ್ನು ತೋರಿಸಲು ಯಾವುದೇ ನೇರ ಪುರಾವೆಗಳಿಲ್ಲ. ಆರೋಪಿಗಳು ಸ್ಫೋಟಕ ವಸ್ತುಗಳನ್ನು ಹೊಂದಿದ್ದರು ಎಂಬ ವಾದವನ್ನು ಸಮರ್ಥಿಸುವ ದಾಖಲೆಗಳೂ ಲಭ್ಯವಾಗಿಲ್ಲ. ಆರೋಪಿಯನ್ನು ಯಾವುದೇ ಅಂಕದಲ್ಲಿ ಸಂಪರ್ಕಿಸಲು ಯಾವುದೇ ವಸ್ತುವನ್ನು ಸಂಪೂರ್ಣವಾಗಿ ಹೊಂದಿರದ ಪ್ರಕರಣವನ್ನು ಮುಂದುವರಿಸುವುದು ನ್ಯಾಯಾಂಗದ ಸಮಯವನ್ನು ವ್ಯರ್ಥ ಮಾಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.