ಪಟ್ಟಣಂತಿಟ್ಟ: ಅಪ್ರಾಪ್ತ ವಯಸ ಬಾಲಕಿಯ ಮೇಲೆ ಎರಡು ವರ್ಷಗಳ ಕಾಲ ಅತ್ಯಾಚಾರವನ್ನು ಎಸಗಿದ್ದಕ್ಕಾಗಿ 41ರ ಹರೆಯದ ವ್ಯಕ್ತಿಯೋರ್ವನಿಗೆ ಇಲ್ಲಿಯ ನ್ಯಾಯಾಲಯವು 142 ವರ್ಷಗಳ ಕಠಿಣ ಜೈಲುಶಿಕ್ಷೆಯನ್ನು ವಿಧಿಸಿದೆ.ಪಟ್ಟಣಂತಿಟ್ಟ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಜಯಕುಮಾರ ಜಾನ್ ಅವರು ಆನಂದನ್ ಪಿ.ಆರ್.ಗೆ 142 ವರ್ಷಗಳ ಕಠಿಣ ಶಿಕ್ಷೆಯ ಜೊತೆಗೆ ಐದು ಲ.ರೂ.ಗಳ ದಂಡವನ್ನೂ ವಿಧಿಸಿದರು.
ಇದು ಜಿಲ್ಲೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣದಲ್ಲಿ ದಾಖಲೆಯ ಶಿಕ್ಷೆಯಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರಾದರೂ,ಆನಂದನ್ ಕೇವಲ 60 ವರ್ಷಗಳನ್ನು ಜೈಲಿನಲ್ಲಿ ಕಳೆಯಬೇಕಾಗುತ್ತದೆ ಎಂದಿದ್ದಾರೆ.2019-21ರ ಅವಧಿಯಲ್ಲಿ ಹತ್ತರ ಹರೆಯದ ಬಾಲಕಿಯ ಕುಟುಂಬದ ಜೊತೆ ವಾಸವಿದ್ದ ಆರೋಪಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆತನಿಗೆ ಪೊಕ್ಸೊ ಕಾಯ್ದೆ ಮತ್ತು ಐಪಿಸಿಯಡಿ ಶಿಕ್ಷೆಯನ್ನು ವಿಧಿಸಲಾಗಿದೆ.ಆರೋಪಿಯು ದಂಡವನ್ನು ಪಾವತಿಸದಿದ್ದರೆ ಇನ್ನೂ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.ತಿರುವಳ್ಳ ಪೊಲೀಸರು 2021,ಮಾ.20ರಂದು ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು.