ನವದೆಹಲಿ: ಸೆಪ್ಟೆಂಬರ್ ತಿಂಗಳಲ್ಲಿ 1,47,686 ಕೋಟಿ ರೂಪಾಯಿ ಸರಕು ಮತ್ತು ಸೇವೆ ತೆರಿಗೆ (ಜಿಎಸ್ಟಿ) ಆಕರವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡ 26ರಷ್ಟು ಜಿಗಿತ ಕಂಡಿದೆ. ಜಿಎಸ್ಟಿ ಸಂಗ್ರಹ ಸತತ ಏಳನೇ ತಿಂಗಳು 1.40 ಲಕ್ಷ ಕೋಟಿ ರೂಪಾಯಿ ಗಡಿಯನ್ನು ದಾಟಿದೆ ಎಂದು ಹಣಕಾಸು ಸಚಿವಾಲಯ ಶನಿವಾರ ತಿಳಿಸಿದೆ.
ಒಟ್ಟು ಕೇಂದ್ರೀಯ ಜಿಎಸ್ಟಿ 25,271 ಕೋಟಿ ರೂ. ಹಾಗೂ ರಾಜ್ಯ ಜಿಎಸ್ಟಿ 31,813 ಕೋಟಿ ರೂ. ಮತ್ತು ಏಕೀಕೃತ ಜಿಎಸ್ಟಿ 80,464 ಕೋಟಿ ರೂ. ಇದೆ.ಕರ್ನಾಟಕದಲ್ಲಿ 9,760 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದ್ದು, ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ ಶೇ. 25ರಷ್ಟು ಏರಿಕೆ ಸಾಧಿಸಿದೆ.
ವಾಣಿಜ್ಯ ಎಲ್ಪಿಜಿ ದರ ಕಡಿತ: ವಿಮಾನ ಇಂಧನ (ಎಟಿಎಫ್) ಬೆಲೆಯಲ್ಲಿ ಶೇಕಡ 4.5 ಕಡಿತ ಮಾಡಲಾಗಿದ್ದು, ವಾಣಿಜ್ಯ ಬಳಕೆಯ 19 ಕೆ.ಜಿ. ಎಲ್ಪಿಜಿ ಸಿಲಿಂಡರ್ ದರವನ್ನು 25.50 ರೂಪಾಯಿ ಇಳಿಸಲಾಗಿದೆ. ಇದರಿಂದ ಸಿಲಿಂಡರ್ ದರ ದೆಹಲಿಯಲ್ಲಿ 1,859.50 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನಗಳ ಬೆಲೆಗಳು ಇಳಿಯುತ್ತಿರುವ ಹಿನ್ನೆಲೆಯಲ್ಲಿ ಇದು ಜೂನ್ನಿಂದೀಚೆಗೆ ಮಾಡಲಾದ ಆರನೇ ಅನಿಲ ಬೆಲೆ ಕಡಿತವಾಗಿದೆ. ಗೃಹ ಬಳಕೆಯ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ. ಅದರ ಬೆಲೆ 1,053 ರೂಪಾಯಿ ಆಗಿದೆ. ಏವಿಯೇಷನ್ ಟರ್ಬೆನ್ ಫ್ಯುಯಲ್ (ವಿಮಾನ ಇಂಧನ-ಎಟಿಎಫ್) ಬೆಲೆ ಶೇಕಡ 4.5ರಷ್ಟು, ಅಂದರೆ 5,521.17 ರೂಪಾಯಿ ಕಡಿತಗೊಂಡಿದೆ. ಇದರಿಂದಾಗಿ ದೆಹಲಿಯಲ್ಲಿ ಎಟಿಎಫ್ ದರ ಒಂದು ಕಿಲೋ ಲೀಟರ್ಗೆ 1,15,520.27 ರೂಪಾಯಿ ಆಗಿದೆ. ಎಟಿಎಫ್ ದರ ಪ್ರತಿ 15 ದಿನಕ್ಕೆ ಬದಲಾಗುತ್ತದೆ.
ಅವಧಿ ವಿಸ್ತರಣೆ
2021-22ನೇ ಸಾಲಿನ ತೆರಿಗೆ ಲೆಕ್ಕಪರಿಶೋಧನಾ (ಆಡಿಟ್) ವರದಿ ಸಲ್ಲಿಕೆಯ ಗಡುವವನ್ನು ಸೆ. 30ರ ಬದಲಿಗೆ ಅಕ್ಟೋಬರ್ 7ರ ವರೆಗೆ ಹಿಗ್ಗಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.
ಯುಪಿಐ ವಹಿವಾಟು ಶೇಕಡ 3 ವೃದ್ಧಿ
ಸೆಪ್ಟೆಂಬರ್ ತಿಂಗಳಲ್ಲಿ ಯುಪಿಐ ವಹಿವಾಟು ಆಗಸ್ಟ್ ತಿಂಗಳಿಗಿಂತ ಶೇಕಡ 3 ಹೆಚ್ಚಳವಾಗಿದ್ದು ಒಟ್ಟು 678 ಕೋಟಿ ವ್ಯವಹಾರ ನಡೆದಿದೆ. ಈ ವಹಿವಾಟುಗಳ ಒಟ್ಟು ಮೊತ್ತ 11.16 ಲಕ್ಷ ಕೋಟಿ ರೂಪಾಯಿ ಆಗಿದೆ. ಇದು ಆಗಸ್ಟ್ನಲ್ಲಿ 657 ಕೋಟಿ ವಹಿವಾಟಿನ ಮೂಲಕ 10.73 ಲಕ್ಷ ಕೋಟಿ ರೂ. ನಡೆದಿತ್ತು.
ನಿರುದ್ಯೋಗ ಪ್ರಮಾಣ ಇಳಿಕೆ: ಸೆಪ್ಟೆಂಬರ್ನಲ್ಲಿ ನಿರುದ್ಯೋಗ ದರವು ಶೇ. 6.43ಕ್ಕೆ ಇಳಿದಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ವರದಿ ತಿಳಿಸಿದೆ.
ಹೆಚ್ಚುವರಿ ಸುಂಕ ಮುಂದೂಡಿಕೆ
ಪ್ರತಿ ಲೀಟರ್ ಪೆಟ್ರೋಲ್ ತಲಾ 2 ರೂಪಾಯಿ ಹೆಚ್ಚುವರಿ ಅಬಕಾರಿ ಸುಂಕ ವಿಧಿಸುವ ನಿರ್ಧಾರವನ್ನು ಒಂದು ತಿಂಗಳು, ಡೀಸೆಲ್ ಮೇಲಿನ ಕರವನ್ನು 6 ತಿಂಗಳು ಮುಂದಕ್ಕೆ ಹಾಕಿರುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಗೃಹ ಸಾಲ ಬಡ್ಡಿ ಏರಿಕೆ
ಆರ್ಬಿಐ ರೆಪೊ ದರ ಏರಿಕೆ ಮಾಡಿದ ಬೆನ್ನಿಗೆ ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಎಸ್ಬಿಐ, ಪಿಎನ್ಬಿ, ಖಾಸಗಿ ವಲಯದ ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ಗಳ ಸಾಲದ ಮೇಲಿನ ಬಡ್ಡಿ ದರದಲ್ಲಿ 50 ಮೂಲಾಂಶ ಹೆಚ್ಚಳ ಮಾಡಿವೆ. ಇಬಿಎಲ್ಆರ್ ಮತ್ತು ಎಂಸಿಎಲ್ಆರ್ ಅಡಿಯಲ್ಲಿ ಸಾಲ ಪಡೆದ ಗ್ರಾಹಕರಿಗೆ ಇದು ಅನ್ವಯ ಆಗಲಿದ್ದು, ಇದರಿಂದಾಗಿ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಇಎಂಐ ಹೊರೆ ಹೆಚ್ಚಲಿದೆ.