ಕಾಸರಗೋಡು: ಜಿಲ್ಲೆಯ ಆರೋಗ್ಯ ವಲಯ ಹಾಗೂ ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಒತ್ತಾಯಿಸಿ ಖ್ಯಾತ ಸಾಮಾಜಿಕ ಹೋರಾಟಗಾರ್ತಿ ದಯಾಭಾಯಿ ತಿರುವನಂತಪುರದಲ್ಲಿ ಕಳೆದ 18ದಿವಸಗಳಿಂದ ನಡೆಸಿಕೊಂಡು ಬರುತ್ತಿದ್ದ ನಿರಾಹಾರ ಸತ್ಯಾಗ್ರಹ ಕೊನೆಗೊಳಿಸಿದ್ದಾರೆ.
ಕಾಸರಗೋಡು ಜಿಲ್ಲೆಯನ್ನು ಏಮ್ಸ್ ಆಸ್ಪತ್ರೆ ಪಟ್ಟಿಯಲ್ಲಿ ಒಳಪಡಿಸಬೇಕೆಂಬ ಬೇಡಿಕೆಯ ಹೊರತಾಗಿ ಇತರ ಎಲ್ಲ ಬೇಡಿಕೆಗಳನ್ನು ಸರ್ಕಾರ ಅಂಗೀಕರಿಸಿತು. ಈ ಬಗ್ಗೆ ಸರ್ಕಾರ ಸಹಿಮಾಡಲಾದ ತೀರ್ಮಾನದ ಮಿನಿಟ್ಸ್ ಬುಕನ್ನು ಸಚಿವೆಯರಾದ ವೀಣಾ ಜಾರ್ಜ್ ಮತ್ತು ಆರ್.ಬಿಂದು ಧರಣಿನಿರತ ದಯಾಭಾಯಿ ಅವರಿಗೆ ನೀಡಿ ಉಪವಾಸ ಕೊನೆಗೊಳಿಸುವಂತೆ ಮಾಡಿಕೊಂಡ ಮನವಿ ಪುರಸ್ಕರಿಸಿ, ಸಚಿವೆಯರು ನೀಡಿದ ಲಿಂಬೆರಸ ಸ್ವೀಕರಿಸಿ ನಿರಾಹಾರ ಕೊನೆಗೊಳಿಸಿದರು. ಸರ್ಕಾರ ನೀಡಿರುವ ಭರವಸೆ ಈಡೇರಿಸದಿದ್ದಲ್ಲಿ, ಸೆಕ್ರೆಟೇರಿಯೆಟ್ ಎದುರು ಕೇಶಮುಂಡನ ನಡೆಸಿ ಮತ್ತೆ ನಿರಾಹಾರ ಧರಣಿ ಕೈಗೊಳ್ಳುವುದಾಗಿಯೂ ದಯಾಭಾಯಿ ಶಪಥ ಹೂಡಿದ್ದಾರೆ.
ಸಮಾಜಸೇವಕಿ ದಯಾಭಾಯಿಗೆ ನೀಡಿದ ಭರವಸೆ ಸರ್ಕಾರ ಈಡೇರಿಸದಿದ್ದಲ್ಲಿ ತಿರುವನಂತಪುರದಲ್ಲಿ ಸೆಕ್ರೆಟೇರಿಯೆಟ್‍ಗೆ ಹಾಗೂ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ನಡೆಸುವುದಾಗಿ ಐಕ್ಯರಂಗ ರಾಜ್ಯ ಸಂಚಾಲಕ ಎಂ.ಎಂ ಹಸನ್ ತಿಳಿಸಿದ್ದಾರೆ.
18 ದಿವಸಗಳ ನಿರಾಹಾರ ಸತ್ಯಾಗ್ರಹ ಕೊನೆಗೊಳಿಸಿದ ದಯಾಭಾಯಿ
0
ಅಕ್ಟೋಬರ್ 20, 2022
Tags