ವಾಷಿಂಗ್ಟನ್: ಸಿಖ್ ವಿರೋಧಿ ದಂಗೆ ನಡೆದ 1984, ಆಧುನಿಕ ಭಾರತದ 'ಕರಾಳ ವರ್ಷ'ವಾಗಿದೆ ಎಂದು ಅಮೆರಿಕ ಸಂಸದ ಪ್ಯಾಟ್ ಟೂಮಿ ಅವರು ಅಮೆರಿಕ ಸಂಸತ್ತಿನಲ್ಲಿ ಹೇಳಿದ್ದಾರೆ. ಸಿಖ್ ಸಮುದಾಯದ ಮೇಲೆ ನಡೆದ ದೌರ್ಜನ್ಯಗಳನ್ನು ನೆನಪಿಸಿಕೊಳ್ಳುವ ಅವಶ್ಯಕತೆ ಇದೆ ಮತ್ತು ದೌರ್ಜನ್ಯ ಎಸಗಿದವರಿಗೆ ಶಿಕ್ಷೆಯಾಗಬೇಕು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಸಿಖ್ ಕಾಂಗ್ರೇಸಿಯಲ್ ಕಾಕಸ್‌ನ ಸದಸ್ಯರಾಗಿರುವ ರಿಪಬ್ಲಿಕನ್ ಪಕ್ಷದ ಪ್ಯಾಟ್ ಅವರು, 'ಭಾರತದಲ್ಲಿ ಎರಡು ಸಮುದಾಯಗಳ ವಿರುದ್ಧ ಹಲವಾರು ಹಿಂಸಾತ್ಮಕ ಘಟನೆಗಳು ನಡೆದಿವೆ. ಆದರೆ, ಇವುಗಳಲ್ಲಿ ಸಿಖ್ಖರನ್ನು ಗುರಿಯಾಗಿಸಿ ಹಲವು ಹಿಂಸಾತ್ಮಕ ಘಟನೆಗಳು ನಡೆದಿವೆ' ಎಂದರು.
'ಸಿಖ್ ಧರ್ಮಕ್ಕೆ ಸುಮಾರು 600 ವರ್ಷಗಳ ಇತಿಹಾಸ ಇದೆ. ವಿಶ್ವದಲ್ಲಿ 3 ಕೋಟಿ ಜನರು ಸಿಖ್ ಧರ್ಮವನ್ನು ಪಾಲಿಸುತ್ತಿದ್ದಾರೆ. ಅಮೆರಿಕದಲ್ಲಿ 7 ಲಕ್ಷ ಜನರಿದ್ದಾರೆ' ಎಂದ ಅವರು, ಕೋವಿಡ್ ಸಮಯದಲ್ಲಿ ಸಿಖ್ಖರು ಅಮೆರಿಕದಲ್ಲಿ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.
ಧಾರ್ಮಿಕ ಕಿರುಕುಳ: 'ನ್ಯೂಯಾರ್ಕ್ ಟೈಮ್ಸ್'ಗೆ ಜಾಹೀರಾತು
ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ 'ಧಾರ್ಮಿಕ ಕಿರುಕುಳ, ತಾರತಮ್ಯ ಮತ್ತು ಮಾರಕ ಗುಂಪು ಹಿಂಸೆ ನಡೆಯುತ್ತಿದೆ' ಎಂದು ಭಾರತ ಮೂಲದ ಒಂಬತ್ತು ಮಾನವ ಹಕ್ಕುಗಳ ಹೋರಾಟ ಸಂಸ್ಥೆಗಳು 'ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಗೆ ಜಾಹೀರಾತು ನೀಡಿವೆ.
ಮಹಾತ್ಮ ಗಾಂಧಿ ಅವರ ಜಯಂತಿಯ (ಅ.2) ಹಿಂದಿನ ದಿನ ಈ ಜಾಹೀರಾತನ್ನು ನೀಡಲಾಗಿದೆ.
ಅಮೆರಿಕನ್ ಮುಸ್ಲಿಂ ಇನ್‌ಸ್ಟಿಟ್ಯೂಟ್, ಅಸೋಸಿಯೇಷನ್ ಆಫ್ ಇಂಡಿಯನ್ ಮುಸ್ಲಿಂ ಆಫ್ ಅಮೆರಿಕ ಹೋವರ್ಡ್ ಕೇನ್, ಐಸಿಎನ್‌ಎ ಕೌನ್ಸಿಲ್ ಆಫ್ ಸೋಷಿಯಲ್ ಜಸ್ಟೀಸ್, ದಲಿತ್ ಸಾಲಿಡಾರಿಟಿ ಫೋರಂ ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್, ಇಂಡಿಯನ್ ಅಮೆರಿಕನ್ ಮುಸ್ಲಿಂ ಕೌನ್ಸಿಲ್ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಪೀಸ್ ಆಯಂಡ್ ಜಸ್ಟೀಸ್ ಮತ್ತು ಅಮೆರಿಕನ್ ಸಿಖ್ ಕೌನ್ಸಿಲ್ ಸಂಸ್ಥೆಗಳು ಜಾಹೀರಾತು ನೀಡಿವೆ.