ಲಂಡನ್: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದನ್ನು ಭಾರತ ಸೇರಿದಂತೆ ಇಡೀ ವಿಶ್ವದಾದ್ಯಂತ ಹಲವರು ಸಂಭ್ರಮಿಸಿದ್ದಾರೆ. ಬಿಟನ್ನಿನ ಮೊದಲ ಶ್ವೇತವರ್ಣೀಯೇತರ ಮತ್ತು ಹಿಂದು ಪ್ರಧಾನಿಯಾಗುವ ಮೂಲಕ ರಿಷಿ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ರಿಷಿ ಪ್ರಧಾನಿಯಾಗುತ್ತಿದ್ದಂತೆ ಅವರ ಮೂಲ, ಕುಟುಂಬದ ಹಿನ್ನೆಲೆ, ಪತ್ನಿ, ಮಕ್ಕಳು ಹಾಗೂ ಭಾರತ ಮತ್ತು ಕರ್ನಾಟಕಕ್ಕೆ ಇರುವ ಸಂಬಂಧದ ಬಗ್ಗೆ ಗೂಗಲ್ನಲ್ಲಿ ಸಾಕಷ್ಟು ಜನರು ಹುಡುಕಾಡಿದ್ದಾರೆ. ಈ ಹುಡುಕಾಟವು ಸಹ ಒಂದು ದಾಖಲೆಯಾಗಿದೆ.
ಅ.26ರಂದು ಒಂದೇ ದಿನ ರಿಷಿ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಬಗ್ಗೆ ತಿಳಿದುಕೊಳ್ಳಲು ಬರೋಬ್ಬರಿ 200 ಕೋಟಿ ಮಂದಿ ಗೂಗಲ್ ಸರ್ಚ್ ಇಂಜಿನ್ನಲ್ಲಿ ಹುಡುಕಾಟ ನಡೆಸಿದ್ದಾರೆ. ಕಳೆದ ಸೋಮವಾರ 1 ಲಕ್ಷಕ್ಕೂ ಅಧಿಕ ಹುಡುಕಾಟ ಅಕ್ಷತಾ ಮೂರ್ತಿ ಹೆಸರಲ್ಲಿ ನಡೆದರೆ, ಅದೇ ದಿನ 2 ಮಿಲಿಯನ್ಗೂ ಅಧಿಕ ಹುಡುಕಾಟ ರಿಷಿ ಸುನಕ್ ಹೆಸರಿನಲ್ಲಿ ಗೂಗಲ್ನಲ್ಲಿ ಹುಡುಕಾಡಿದ್ದಾರೆ.
ಅಕ್ಟೋಬರ್ 24ರಂದು ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ದಿನದಿಂದ ಟ್ವಿಟರ್ನಲ್ಲಿ ಸುಮಾರು 6,80,000 ಟ್ವೀಟ್ಗಳನ್ನು ಮಾಡಲಾಗಿದೆ. ಈ ರೀತಿಯ ಹುಡುಕಾಟದಲ್ಲಿ ಬಹುತೇಕ ಮಂದಿ ರಿಷಿ ಅವರು ಧರ್ಮ, ವಯಸ್ಸು, ಆಹಾರದ ಆದ್ಯತೆಗಳ ಬಗ್ಗೆ ಹುಡುಕಾಡಿದ್ದಾರೆ.
ಕನ್ಸರ್ವೆಟಿವ್ ಪಕ್ಷದ ಸಂಸದ, ಭಾರತ ಮೂಲದ ರಿಷಿ ಸುನಕ್ ಮಂಗಳವಾರ (ಅ.25) ಬ್ರಿಟನ್ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಸೋಮವಾರ (ಅ.24) ಪ್ರಧಾನಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಅವರು ಬ್ರಿಟನ್ ರಾಜ ಮೂರನೇ ಚಾರ್ಲ್ಸ್ರನ್ನು ಭೇಟಿಯಾಗಿ ದೇಶದ 57ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಇದರೊಂದಿಗೆ ಬ್ರಿಟನ್ ಪ್ರಥಮ ಶ್ವೇತವರ್ಣೀಯೇತರ, ಅತ್ಯಂತ ಕಿರಿಯ ವಯಸ್ಸಿನ ಹಾಗೂ ಪ್ರಥಮ ಹಿಂದು ಪ್ರಧಾನಿಯನ್ನು ಪಡೆದಂತಾಗಿದೆ. ಸುನಕ್ ನಾಲ್ಕು ತಿಂಗಳಲ್ಲಿ ಬ್ರಿಟನ್ನಿನ ಮೂರನೇ ಪ್ರಧಾನಿಯಾಗಿದ್ದಾರೆ.