ನವದೆಹಲಿ:ಮಹಾತ್ಮಾ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (MGNREGA)ಯಡಿ ನೋಂದಾಯಿಸಿಕೊಂಡ ಶೇ.39ರಷ್ಟು ಕುಟುಂಬಗಳಿಗೆ ಕೋವಿಡ್ ಸಾಂಕ್ರಾಮಿಕ ಹಾವಳಿಯ ವರ್ಷವಾದ 2020-21 ರಲ್ಲಿ ಒಂದೇ ಒಂದು ದಿನವೂ ಉದ್ಯೋಗ ದೊರೆತಿರಲಿಲ್ಲವೆಂದು ಸಮೀಕ್ಷಾ ವರದಿಯೊಂದು ಮಂಗಳವಾರ ತಿಳಿಸಿದೆ.
MGNREGA ಯೋಜನೆಯಡಿ ಸರಾಸರಿ ಶೇ.36ರಷ್ಟು ಕುಟುಂಬಗಳಿಗೆ ಮಾತ್ರವೇ 15 ದಿನಗಳಲ್ಲಿ ವೇತನ ಪಾವತಿಯಾಗಿತ್ತೆಂದು ವರದಿ ತಿಳಿಸಿದೆ. ಆಝೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಕುರಿತ ನಾಗರಿಕ ಸಂಘಟನೆಗಳ ರಾಷ್ಟ್ರೀಯ ಒಕ್ಕೂಟ ಮತ್ತು ಸಿಓಆರ್‌ಡಿ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಈ ಸಮೀಕ್ಷಾ ವರದಿಯನ್ನು ನಡೆಸಿತ್ತು. ಸುಮಾರು 2000 ಕುಟುಂಬಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವು.
ಬಿಹಾರದ ಫುಲ್‌ಪರಸ್(ಮಧುಬನಿ ಜಿಲ್ಲೆ) ಹಾಗೂ ಚ್ಛತಪುರ (ಸುಪೌಲ್ ಜಿಲ್ಲೆ) ಹಾಗೂ ಕರ್ನಾಟಕದ ಬೀದರ್ (ಬೀದರ್) ಹಾಗೂ ದೇವದುರ್ಗ (ರಾಯಚೂರು), ಮಧ್ಯಪ್ರದೇಶದ ಖಾಲ್ವಾ (ಖಾಂಡ್ವಾ)ಹಾಗೂ ಘಟಿಗಾಂವ್ (ಗ್ವಾಲಿಯರ್) ಮತ್ತು ಮಹಾರಾಷ್ಟ್ರದ ವಾರ್ಧಾ ಹಾಗೂ ಸುರ್ಗಾನಾ (ನಾಶಿಕ್) ಬ್ಲಾಕ್‌ಗಳಲ್ಲಿ ಈ ಸಮೀಕ್ಷೆಗಳನ್ನು ನಡೆಸಲಾಗಿತ್ತು.
ಸಮೀಕ್ಷೆ ನಡೆಸಲಾದ ಎಲ್ಲಾ ಬ್ಲಾಕ್‌ಗಳಲ್ಲಿಯೂ ಕೋವಿಡ್ ಹಾವಳಿಯ ವರ್ಷಗಳಲ್ಲಿ ಕೆಲಸ ಮಾಡಲು ಆಸಕ್ತರಾಗಿದ್ದ ಶೇ.39 ಮಂದಿ, ಸರಾಸರಿ 77 ದಿನಗಳ ಉದ್ಯೋಗಗಳನ್ನು ಬಯಸಿದ್ದರಾದರೂ ಅವರಿಗೆ ಒಂದೇ ಒಂದು ದಿನ ಉದ್ಯೋಗ ಲಭಿಸಿರಲಿಲ್ಲವೆಂದು ವರದಿ ತಿಳಿಸಿದೆ.
ಎಂನರೇಗಾ ಯೋಜನೆಯಡಿ ಕೆಲಸ ದೊರೆತ ಕೆಲವು ಕುಟುಂಬಗಳಿಗೆ ಸರಾಸರಿಯಾಗಿ 64 ದಿನಗಳ ಉದ್ಯೋಗ ಲಭಿಸಿತ್ತು ಎಂದು ವರದಿ ತಿಳಿಸಿದೆ.
ಆದರೆ ಈ ಎಲ್ಲಾ ನ್ಯೂನತೆಗಳ ಹೊರತಾಗಿಯೂ ಎಂನರೇಗಾ ಯೋಜನೆಯು ಕೋವಿಡ್ ಹಾವಳಿಯ ಸಂದರ್ಭದಲ್ಲಿ ಹಲವಾರು ದುರ್ಬಲ ಕುಟುಂಬಗಳಿಗೆ ಗಣನೀಯ ಪ್ರಮಾಣದ ಆದಾಯ ನಷ್ಟವಾಗುವುದನ್ನು ತಡೆದಿದೆಯೆಂದು ಸಮೀಕ್ಷೆ ತಿಳಿಸಿದೆ.
ಎಂನರೇಗಾ ದುಡಿಮೆಯಿಂದಾಗಿ ದೊರೆತ ಆದಾಯವು, ಆ ಕುಟುಂಬಗಳ ಆದಾಯದಲ್ಲಿ ಶೇ.20ರಿಂದ 80ರಷ್ಟು ಆದಾಯ ನಷ್ಟವನ್ನು ತಪ್ಪಿಸಿದೆ ಎಂದು ವರದಿ ತಿಳಿಸಿದೆ.
ಎಂನರೇಗಾ ಯೋಜನೆಯ ಅಗತ್ಯ ಹಾಗೂ ಅದರ ಮೌಲ್ಯವು ಶ್ರಮಿಕರಿಗೆ ಅರಿವಾಗಿದೆ ಎಂಬುದನ್ನು ನಮ್ಮ ಅಧ್ಯಯನ ವರದಿ ತೋರಿಸಿಕೊಟ್ಟಿದೆ ಹಾಗೂ ಎಂನರೇಗಾ ಯೋಜನೆಯಡಿ ಪ್ರತಿ ವ್ಯಕ್ತಿಗೂ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಒದಗಿಸಬೇಕೆಂದು ಪ್ರತಿ 10 ಫಲಾನುಭವಿ ಕುಟುಂಬಗಳ ಪೈಕಿ 8 ಕುಟುಂಬಗಳು ಶಿಫಾರಸು ಮಾಡಿವೆಯೆಂದು ಸಮೀಕ್ಷಾ ವರದಿ ತಿಳಿಸಿದೆ.