ನವದೆಹಲಿ:ಕಳೆದ ವರ್ಷ ಶೇ.8.2ರಷ್ಟಿದ್ದ ಭಾರತೀಯ ಆರ್ಥಿಕತೆಯು 2022ರಲ್ಲಿ ಶೇ.5.7ಕ್ಕೆ ಮತ್ತು 2023ರಲ್ಲಿ ಶೇ.4.7ಕ್ಕೆ ಕುಸಿಯುವ ಸಾಧ್ಯತೆಯಿದೆ ಎಂದು ವ್ಯಾಪಾರ ಮತ್ತು ಅಭಿವೃದ್ಧಿ ಕುರಿತು ವಿಶ್ವಸಂಸ್ಥೆ ಸಮ್ಮೇಳನ ಅಥವಾ ಅಂಕ್ಟಾಡ್(UNCTAD) ಅಂದಾಜಿಸಿದೆ.
ಹೆಚ್ಚಿನ ಹಣಕಾಸು ವೆಚ್ಚ ಮತ್ತು ಕಡಿಮೆ ಸಾರ್ವಜನಿಕ ವೆಚ್ಚದಿಂದಾಗಿ ಭಾರತದಲ್ಲಿ ಆರ್ಥಿಕ ಚಟುವಟಿಕೆಗೆ ಅಡಚಣೆಯುಂಟಾಗಿದೆ ಎಂದು ಅಂಕ್ಟಾಡ್ ಸೋಮವಾರ ಬಿಡುಗಡೆಗೊಳಿಸಿದ ತನ್ನ ವ್ಯಾಪಾರ ಮತ್ತು ಅಭಿವೃದ್ಧಿ ವರದಿ 2022ರಲ್ಲಿ ಹೇಳಿದೆ.
ಸರಕಾರವು,ವಿಶೇಷವಾಗಿ ರೈಲು ಮತ್ತು ರಸ್ತೆ ಕ್ಷೇತ್ರದಲ್ಲಿ ಬಂಡವಾಳ ವೆಚ್ಚಗಳನ್ನು ಹೆಚ್ಚಿಸುವ ಯೋಜನೆಗಳನ್ನು ಪ್ರಕಟಿಸಿದೆ. ಆದರೆ ದುರ್ಬಲಗೊಳ್ಳುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ ನೀತಿ ನಿರೂಪಕರು ಹಣಕಾಸು ಅಸಮತೋಲನಗಳನ್ನು ಕಡಿಮೆಗೊಳಿಸುವ ಒತ್ತಡದಲ್ಲಿರುತ್ತಾರೆ ಮತ್ತು ಇದು ಇತರ ಕಡೆಗಳಲ್ಲಿ ವೆಚ್ಚ ಕುಸಿತಕ್ಕೆ ಕಾರಣವಾಗಬಹುದು ಎಂದು ವರದಿಯು ಹೇಳಿದೆ.
ವರದಿಯು ಕೇಂದ್ರದ ಉತ್ಪಾದನೆ ಸಂಯೋಜಿತ ಪ್ರೋತ್ಸಾಹ ಯೋಜನೆಯನ್ನು ಗಮನಕ್ಕೆ ತೆಗೆದುಕೊಂಡಿದೆ. ಈ ಯೋಜನೆಯಡಿ ಸರಕಾರವು ಭಾರತದಲ್ಲಿ ತಯಾರಾದ ಸರಕುಗಳ ಹೆಚ್ಚಿನ ಮಾರಾಟದ ಮೇಲೆ ಶೇ.4ರಿಂದ ಶೇ.6ರಷ್ಟು ಪ್ರೋತ್ಸಾಹ ಧನವನ್ನು ನೀಡುತ್ತದೆ.
ಸರಕಾರವು ತಂದಿರುವ ಈ ಯೋಜನೆಯು ಕಾರ್ಪೊರೇಟ್ ಹೂಡಿಕೆಯನ್ನು ಪ್ರೋತ್ಸಾಹಿಸುತ್ತಿದೆ,ಆದರೆ ಪಳೆಯುಳಿಕೆ ಇಂಧನಕ್ಕಾಗಿ ಹೆಚ್ಚುತ್ತಿರುವ ಆಮದು ಬಿಲ್ಗಳು ವ್ಯಾಪಾರ ಕೊರತೆಯನ್ನು ಹೆಚ್ಚಿಸುತ್ತಿವೆ ಮತ್ತು ವಿದೇಶಿ ವಿನಿಮಯ ಮೀಸಲುಗಳ ಆಮದು ವ್ಯಾಪ್ತಿಯ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿವೆ ಎಂದು ವರದಿಯು ತಿಳಿಸಿದೆ.
ವಿಶ್ವ ಆರ್ಥಿಕತೆಯು 2022ರಲ್ಲಿ ಶೇ.2.6ರಷ್ಟು ಬೆಳೆಯುವ ಸಾಧ್ಯತೆಯನ್ನೂ ಅಂಕ್ಟಾಡ್ ಭವಿಷ್ಯ ನುಡಿದಿದೆ. ಇದು ಕಳೆದ ವರ್ಷದ ವರದಿಯಲ್ಲಿ ಅಂದಾಜಿಸಿದ್ದಕ್ಕಿಂತ ಶೇ.0.9ರಷ್ಟು ಕಡಿಮೆಯಾಗಿದೆ. 2023ರ ಅಂತ್ಯದ ವೇಳೆಗೆ ವಿಶ್ವ ಆರ್ಥಿಕತೆಯ ಬೆಳವಣಿಗೆಯು ಶೇ.2.2ರಷ್ಟು ನಿಧಾನಗೊಳ್ಳುವ ಸಾಧ್ಯತೆಯನ್ನೂ ಅದು ಮುನ್ನಂದಾಜಿಸಿದೆ.
ವರದಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್,ದೇಶದ ಆರ್ಥಿಕ ಸಮಸ್ಯೆಗಳಿಗೆ ಕೇಂದ್ರವು ಏಕೈಕ ಹೊಣೆಗಾರನಾಗಿದೆ ಎಂದು ಹೇಳಿದೆ. ಆರ್ಥಿಕತೆಯ ನಿಜವಾದ ಸ್ಥಿತಿಯನ್ನು ಮರೆಮಾಡಲು ಸರಕಾರವು ಉತ್ಪ್ರೇಕ್ಷಿತ ದತ್ತಾಂಶಗಳನ್ನು ಉಲ್ಲೇಖಿಸುತ್ತಿದೆ,ಆದರೆ ಯಾರನ್ನೂ ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಕ್ತಾರ ಅಂಶುಲ್ ಅವಿಜಿತ್ ಹೇಳಿದರು. ಹಣದುಬ್ಬರವು ಹೆಚ್ಚಿನ ಮಟ್ಟದಲ್ಲಿಯೇ ಉಳಿದುಕೊಂಡಿದೆ,ನಿರುದ್ಯೋಗ ಹೆಚ್ಚುತ್ತಿದೆ ಮತ್ತು ದಿನದಿನವೂ ಬೆಳವಣಿಗೆ ದರವನ್ನು ಕೆಳಮುಖವಾಗಿ ಪರಿಷ್ಕರಿಸಲಾಗುತ್ತಿದೆ ಎಂದರು.