ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) 2023ರಲ್ಲಿ ಸೂರ್ಯನ ಬಳಿಗೆ ಒಂದು ಉಪಗ್ರಹ ಮತ್ತು ಚಂದ್ರನಲ್ಲಿಗೆ ಒಂದು ನೌಕೆಯನ್ನು ಕಳುಹಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ ಅವರು ಹೇಳಿದ್ದಾರೆ. 2024ರ ಗಗನಯಾನ ಯೋಜನೆ ಸಂಬಂಧ, 2023ರಲ್ಲಿ ಆರು ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
2023ರ ಫೆಬ್ರುವರಿಯಲ್ಲಿ ಚಂದ್ರನಲ್ಲಿಗೆ 'ಆದಿತ್ಯ-ಎಲ್1' ಉಪಗ್ರಹವನ್ನು ಕಳುಹಿಸಲು ಯೋಜನೆ ರೂಪಿಸಲಾಗಿದೆ. 400 ಕೆ.ಜಿ. ತೂಕದ ಆದಿತ್ಯ-ಎಲ್1 ಸೂರ್ಯನನ್ನು ಸುತ್ತು ಹಾಕುತ್ತಾ, ಅಧ್ಯಯನ ನಡೆಸಲಿದೆ. ಜೂನ್ ವೇಳೆಗೆ ಚಂದ್ರನ ಬಳಿಗೆ ಚಂದ್ರಯಾನ-3 ನೌಕೆಯನ್ನು ಕಳುಹಿಸಲಾಗುತ್ತದೆ. ಚಂದ್ರಯಾನ-2 ಯೋಜನೆಯನ್ನೇ ಚಂದ್ರಯಾನ-3 ಅನುಸರಿಸಲಿದೆ. ಆದರೆ ನೌಕೆಯು ಹೆಚ್ಚು ಕರಾರುವಾಕ್ಕಾಗಿ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇಸ್ರೊವಿನ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ ಗಗನಯಾನವೂ ನಿಗದಿಯಂತೆ ನಡೆಯುತ್ತಿದೆ. 2024ರಲ್ಲಿ ಮಾನವರನ್ನು ಚಂದ್ರನಲ್ಲಿಗೆ ಕಳುಹಿಸುವುದಕ್ಕೂ ಮುನ್ನ, ಆರು ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗತ್ತದೆ ಎಂದು ಮಾಹಿತಿ ನೀಡಿದ್ದಾರೆ.